43 : 1
حمٓ
ಹಾ-ಮೀಮ್.
43 : 2
وَٱلْكِتَـٰبِ ٱلْمُبِينِ
ಸ್ಪಷ್ಟ ಗ್ರಂಥದ ಮೇಲಾಣೆ!
43 : 3
إِنَّا جَعَلْنَـٰهُ قُرْءَٰنًا عَرَبِيًّا لَّعَلَّكُمْ تَعْقِلُونَ
ನಿಶ್ಚಯವಾಗಿಯೂ ನಾವು ಇದನ್ನು ಅರಬೀ ಭಾಷೆಯಲ್ಲಿರುವ ಕುರ್‌ಆನ್ ಆಗಿ ಮಾಡಿದ್ದೇವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.
43 : 4
وَإِنَّهُۥ فِىٓ أُمِّ ٱلْكِتَـٰبِ لَدَيْنَا لَعَلِىٌّ حَكِيمٌ
ನಿಶ್ಚಯವಾಗಿಯೂ ಅದು ನಮ್ಮ ಬಳಿ ಮೂಲಗ್ರಂಥದಲ್ಲಿದೆ (ಲೌಹುಲ್ ಮಹ್ಫೂಝ್‌ನಲ್ಲಿದೆ). ಅದು ಅತ್ಯುನ್ನತ ಮತ್ತು ವಿವೇಕಭರಿತವಾಗಿದೆ.
43 : 5
أَفَنَضْرِبُ عَنكُمُ ٱلذِّكْرَ صَفْحًا أَن كُنتُمْ قَوْمًا مُّسْرِفِينَ
ನೀವು ಎಲ್ಲೆ ಮೀರಿದ ಜನರಾಗಿದ್ದೀರಿ ಎಂಬ ಕಾರಣದಿಂದ ಈ ಉಪದೇಶವನ್ನು ನಾವು ನಿಮ್ಮಿಂದ ದೂರ ಸರಿಸುವೆವೇ?
43 : 6
وَكَمْ أَرْسَلْنَا مِن نَّبِىٍّ فِى ٱلْأَوَّلِينَ
ನಾವು ಪೂರ್ವಿಕ ಸಮುದಾಯಗಳಲ್ಲಿ ಎಷ್ಟೋ ಪ್ರವಾದಿಗಳನ್ನು ಕಳುಹಿಸಿದ್ದೇವೆ.
43 : 7
وَمَا يَأْتِيهِم مِّن نَّبِىٍّ إِلَّا كَانُوا۟ بِهِۦ يَسْتَهْزِءُونَ
ಯಾವುದೇ ಒಬ್ಬ ಪ್ರವಾದಿ ಅವರ ಬಳಿ ಬರುವಾಗಲೆಲ್ಲಾ ಅವರು ಆ ಪ್ರವಾದಿಯನ್ನು ತಮಾಷೆ ಮಾಡುತ್ತಿದ್ದರು.
43 : 8
فَأَهْلَكْنَآ أَشَدَّ مِنْهُم بَطْشًا وَمَضَىٰ مَثَلُ ٱلْأَوَّلِينَ
ಇವರಿಗಿಂತಲೂ ಶಕ್ತಿಶಾಲಿಗಳನ್ನು ನಾವು ನಾಶ ಮಾಡಿದ್ದೇವೆ. ಪೂರ್ವಿಕರ ಉದಾಹರಣೆಗಳು ಈಗಾಗಲೇ ಗತಿಸಿಹೋಗಿವೆ.
43 : 9
وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ لَيَقُولُنَّ خَلَقَهُنَّ ٱلْعَزِيزُ ٱلْعَلِيمُ
“ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಯಾರು?” ಎಂದು ನೀವು ಅವರೊಡನೆ ಕೇಳಿದರೆ, “ಅವುಗಳನ್ನು ಸೃಷ್ಟಿಸಿದ್ದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹು” ಎಂದು ಅವರು ಖಂಡಿತವಾಗಿಯೂ ಉತ್ತರಿಸುವರು.
43 : 10
ٱلَّذِى جَعَلَ لَكُمُ ٱلْأَرْضَ مَهْدًا وَجَعَلَ لَكُمْ فِيهَا سُبُلًا لَّعَلَّكُمْ تَهْتَدُونَ
ಅವನು ಯಾರೆಂದರೆ, ನಿಮಗೆ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿಕೊಟ್ಟವನು ಮತ್ತು ಅದರಲ್ಲಿ ನೀವು ದಾರಿ ಕಂಡುಕೊಳ್ಳುವುದಕ್ಕಾಗಿ ಮಾರ್ಗಗಳನ್ನು ಮಾಡಿಕೊಟ್ಟವನು.
43 : 11
وَٱلَّذِى نَزَّلَ مِنَ ٱلسَّمَآءِ مَآءًۢ بِقَدَرٍ فَأَنشَرْنَا بِهِۦ بَلْدَةً مَّيْتًا ۚ كَذَٰلِكَ تُخْرَجُونَ
ಒಂದು ನಿರ್ಣಯಕ್ಕೆ ಅನುಗುಣವಾಗಿ ಆಕಾಶದಿಂದ ಮಳೆಯನ್ನು ಸುರಿಸಿಕೊಟ್ಟವನು. ನಂತರ ನಾವು ಅದರ ಮೂಲಕ ನಿರ್ಜೀವ ಪ್ರದೇಶವನ್ನು ಜೀವಂತಗೊಳಿಸಿದೆವು. ಇದೇ ರೀತಿ ನಿಮ್ಮ ಹೊರತರಲಾಗುವುದು.
43 : 12
وَٱلَّذِى خَلَقَ ٱلْأَزْوَٰجَ كُلَّهَا وَجَعَلَ لَكُم مِّنَ ٱلْفُلْكِ وَٱلْأَنْعَـٰمِ مَا تَرْكَبُونَ
ಎಲ್ಲಾ ವಸ್ತುಗಳಲ್ಲೂ ಜೋಡಿಗಳನ್ನು ಸೃಷ್ಟಿಸಿದವನು ಮತ್ತು ನಿಮಗೆ ಸವಾರಿ ಮಾಡಲು ನಾವೆಗಳನ್ನು ಹಾಗೂ ಜಾನುವಾರುಗಳನ್ನು ಮಾಡಿಕೊಟ್ಟವನು.
43 : 13
لِتَسْتَوُۥا۟ عَلَىٰ ظُهُورِهِۦ ثُمَّ تَذْكُرُوا۟ نِعْمَةَ رَبِّكُمْ إِذَا ٱسْتَوَيْتُمْ عَلَيْهِ وَتَقُولُوا۟ سُبْحَـٰنَ ٱلَّذِى سَخَّرَ لَنَا هَـٰذَا وَمَا كُنَّا لَهُۥ مُقْرِنِينَ
ನೀವು ಅವುಗಳ ಬೆನ್ನ ಮೇಲೆ ಆರೂಢರಾಗಿ, ನಂತರ ನೀವು ಅದರ ಮೇಲೆ ಆರೂಢರಾಗುವಾಗ ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹವನ್ನು ನೆನದು ಈ ರೀತಿ ಹೇಳುವುದಕ್ಕಾಗಿ: “ಇದನ್ನು ನಮಗೆ ವಿಧೇಯಗೊಳಿಸಿಕೊಟ್ಟವನು ಪರಮ ಪರಿಶುದ್ಧನು! ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿರಲಿಲ್ಲ.
43 : 14
وَإِنَّآ إِلَىٰ رَبِّنَا لَمُنقَلِبُونَ
ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗುವವರಾಗಿದ್ದೇವೆ.”
43 : 15
وَجَعَلُوا۟ لَهُۥ مِنْ عِبَادِهِۦ جُزْءًا ۚ إِنَّ ٱلْإِنسَـٰنَ لَكَفُورٌ مُّبِينٌ
ಅವರು ಅಲ್ಲಾಹನ ಕೆಲವು ದಾಸರನ್ನು ಅವನ ಒಂದು ಭಾಗವಾಗಿ ಮಾಡಿಕೊಂಡರು. ನಿಶ್ಚಯವಾಗಿಯೂ ಮನುಷ್ಯನು ಅಕ್ಷರಶಃ ಕೃತಘ್ನನಾಗಿದ್ದಾನೆ.
43 : 16
أَمِ ٱتَّخَذَ مِمَّا يَخْلُقُ بَنَاتٍ وَأَصْفَىٰكُم بِٱلْبَنِينَ
ಅಲ್ಲಾಹು ಅವನ ಸೃಷ್ಟಿಗಳಲ್ಲಿ ಸೇರಿದ ಹೆಣ್ಣುಮಕ್ಕಳನ್ನು ತನಗಿಟ್ಟು ನಿಮಗೆ ಗಂಡುಮಕ್ಕಳನ್ನು ದಯಪಾಲಿಸಿದನೇ?
43 : 17
وَإِذَا بُشِّرَ أَحَدُهُم بِمَا ضَرَبَ لِلرَّحْمَـٰنِ مَثَلًا ظَلَّ وَجْهُهُۥ مُسْوَدًّا وَهُوَ كَظِيمٌ
(ವಾಸ್ತವವಾಗಿ) ಅವರು ಪರಮ ದಯಾಳುವಾದ ಅಲ್ಲಾಹನಿಗೆ ಉದಾಹರಣೆ ಕೊಡುತ್ತಿದ್ದ (ಹೆಣ್ಣು ಮಗುವಿನ ಜನನದ) ಬಗ್ಗೆ ಅವರಲ್ಲೊಬ್ಬನಿಗೆ ಶುಭಸುದ್ದಿ ನೀಡಲಾದರೆ, ಅವನ ಮುಖವು ಕರ್‍ರಗಾಗುತ್ತದೆ ಮತ್ತು ಅವನು ಬಹಳ ದುಃಖಿತನಾಗುತ್ತಾನೆ.[1]
43 : 18
أَوَمَن يُنَشَّؤُا۟ فِى ٱلْحِلْيَةِ وَهُوَ فِى ٱلْخِصَامِ غَيْرُ مُبِينٍ
ಆಭರಣಗಳನ್ನು ತೊಟ್ಟು ಬೆಳೆಯುವ ಮತ್ತು ತರ್ಕಿಸುವಾಗ ವಾದವನ್ನು ಸ್ಪಷ್ಟವಾಗಿ ಮುಂದಿಡಲು ಸಾಧ್ಯವಾಗದ (ಹೆಣ್ಣುಮಕ್ಕಳನ್ನು ಅವರು ಅಲ್ಲಾಹನಿಗೆ ಮಕ್ಕಳನ್ನಾಗಿ ಮಾಡಿದ್ದಾರೆಯೇ)?
43 : 19
وَجَعَلُوا۟ ٱلْمَلَـٰٓئِكَةَ ٱلَّذِينَ هُمْ عِبَـٰدُ ٱلرَّحْمَـٰنِ إِنَـٰثًا ۚ أَشَهِدُوا۟ خَلْقَهُمْ ۚ سَتُكْتَبُ شَهَـٰدَتُهُمْ وَيُسْـَٔلُونَ
ಪರಮ ದಯಾಮಯನ (ಅಲ್ಲಾಹನ) ದಾಸರಾದ ದೇವದೂತರು‌ಗಳನ್ನು ಅವರು ಮಹಿಳೆಯರಾಗಿ ಮಾಡಿದ್ದಾರೆ. ಅವರನ್ನು (ದೇವದೂತರು‍ಗಳನ್ನು) ಸೃಷ್ಟಿಸುವಾಗ ಇವರು ಉಪಸ್ಥಿತರಿದ್ದರೇ? ಅವರ ಸಾಕ್ಷ್ಯವನ್ನು ಬರೆದಿಡಲಾಗುವುದು ಮತ್ತು ಅವರಲ್ಲಿ (ಅದರ ಬಗ್ಗೆ) ವಿಚಾರಿಸಲಾಗುವುದು.
43 : 20
وَقَالُوا۟ لَوْ شَآءَ ٱلرَّحْمَـٰنُ مَا عَبَدْنَـٰهُم ۗ مَّا لَهُم بِذَٰلِكَ مِنْ عِلْمٍ ۖ إِنْ هُمْ إِلَّا يَخْرُصُونَ
ಅವರು ಹೇಳಿದರು: “ಪರಮ ದಯಾಮಯನು (ಅಲ್ಲಾಹು) ಇಚ್ಛಿಸುತ್ತಿದ್ದರೆ ನಾವು ಅವರನ್ನು (ದೇವದೂತರು‍ಗಳನ್ನು) ಆರಾಧಿಸುತ್ತಿರಲಿಲ್ಲ.” ಅವರಿಗೆ ಅದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ. ಅವರು ಕೇವಲ ಊಹಿಸಿ ಹೇಳುತ್ತಿದ್ದಾರೆ.
43 : 21
أَمْ ءَاتَيْنَـٰهُمْ كِتَـٰبًا مِّن قَبْلِهِۦ فَهُم بِهِۦ مُسْتَمْسِكُونَ
ನಾವು ಇದಕ್ಕೆ ಮೊದಲು ಅವರಿಗೆ ಯಾವುದಾದರೂ ಗ್ರಂಥವನ್ನು ನೀಡಿದ್ದು ಅವರು ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆಯೇ?
43 : 22
بَلْ قَالُوٓا۟ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَـٰرِهِم مُّهْتَدُونَ
ಅಲ್ಲ, ಅವರು ಹೇಳಿದರು: “ನಮ್ಮ ಪೂರ್ವಜರು ಒಂದು ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆ. ನಿಶ್ಚಯವಾಗಿಯೂ ನಾವು ಅವರ ಹೆಜ್ಜೆಗುರುತುಗಳಲ್ಲೇ ಸನ್ಮಾರ್ಗವನ್ನು ಪಡೆಯುತ್ತೇವೆ.”
43 : 23
وَكَذَٰلِكَ مَآ أَرْسَلْنَا مِن قَبْلِكَ فِى قَرْيَةٍ مِّن نَّذِيرٍ إِلَّا قَالَ مُتْرَفُوهَآ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَـٰرِهِم مُّقْتَدُونَ
ಈ ರೀತಿ ನಿಮಗಿಂತ ಮೊದಲು ಯಾವುದೇ ಪ್ರದೇಶಕ್ಕೆ ನಾವು ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದಾಗಲೆಲ್ಲಾ ಅಲ್ಲಿನ ಸಂಪನ್ನರು, “ನಮ್ಮ ಪೂರ್ವಜರು ಒಂದು ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆ. ನಿಶ್ಚಯವಾಗಿಯೂ ನಾವು ಅವರ ಹೆಜ್ಜೆಗುರುತುಗಳನ್ನೇ ಹಿಂಬಾಲಿಸುತ್ತೇವೆ” ಎಂದು ಹೇಳದಿರಲಿಲ್ಲ.
43 : 24
۞ قَـٰلَ أَوَلَوْ جِئْتُكُم بِأَهْدَىٰ مِمَّا وَجَدتُّمْ عَلَيْهِ ءَابَآءَكُمْ ۖ قَالُوٓا۟ إِنَّا بِمَآ أُرْسِلْتُم بِهِۦ كَـٰفِرُونَ
ಅವರು (ಪ್ರವಾದಿಗಳು) ಹೇಳಿದರು: “ನಿಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನೀವು ಕಂಡಿದ್ದೀರೋ ಅದಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸಿಕೊಡುವ ಸಂದೇಶದೊಂದಿಗೆ ನಾವು ನಿಮ್ಮ ಬಳಿಗೆ ಬಂದರೂ (ನೀವು ಅವರನ್ನೇ ಹಿಂಬಾಲಿಸುವಿರಾ)?” ಅವರು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಖಂಡಿತ ನಿಷೇಧಿಸುತ್ತೇವೆ.”
43 : 25
فَٱنتَقَمْنَا مِنْهُمْ ۖ فَٱنظُرْ كَيْفَ كَانَ عَـٰقِبَةُ ٱلْمُكَذِّبِينَ
ಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು. ಆ ನಿಷೇಧಿಗಳ ಅಂತ್ಯ ಹೇಗಿತ್ತೆಂದು ನೋಡಿರಿ.
43 : 26
وَإِذْ قَالَ إِبْرَٰهِيمُ لِأَبِيهِ وَقَوْمِهِۦٓ إِنَّنِى بَرَآءٌ مِّمَّا تَعْبُدُونَ
ಇಬ್ರಾಹೀಮ್ ತಮ್ಮ ತಂದೆ ಹಾಗೂ ಊರಿನ ಜನರೊಡನೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನೀವು ಆರಾಧಿಸುತ್ತಿರುವ ದೇವರುಗಳಿಂದ ನಾನು ಸಂಪೂರ್ಣ ದೂರವಾಗಿದ್ದೇನೆ.
43 : 27
إِلَّا ٱلَّذِى فَطَرَنِى فَإِنَّهُۥ سَيَهْدِينِ
ನನ್ನನ್ನು ಸೃಷ್ಟಿಸಿದವನ ಹೊರತು. ನಿಶ್ಚಯವಾಗಿಯೂ ಅವನು ನನಗೆ ಸನ್ಮಾರ್ಗವನ್ನು ತೋರಿಸುತ್ತಾನೆ.”
43 : 28
وَجَعَلَهَا كَلِمَةًۢ بَاقِيَةً فِى عَقِبِهِۦ لَعَلَّهُمْ يَرْجِعُونَ
ಇಬ್ರಾಹೀಮರು ಅದನ್ನು ತಮ್ಮ ಸಂತಾನಗಳಲ್ಲೂ ಅವಶೇಷಿಸುವ ಒಂದು ವಚನವಾಗಿ ಮಾಡಿದರು. ಜನರು (ಬಹುದೇವವಿಶ್ವಾಸದಿಂದ ಏಕದೇವವಿಶ್ವಾಸಕ್ಕೆ) ಮರಳುವುದಕ್ಕಾಗಿ.
43 : 29
بَلْ مَتَّعْتُ هَـٰٓؤُلَآءِ وَءَابَآءَهُمْ حَتَّىٰ جَآءَهُمُ ٱلْحَقُّ وَرَسُولٌ مُّبِينٌ
ಅಲ್ಲ, ನಾನು ಅವರಿಗೆ ಮತ್ತು ಅವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆನು. ಎಲ್ಲಿಯವರೆಗೆಂದರೆ ಸತ್ಯಸಂದೇಶ ಮತ್ತು ಅದನ್ನು ಸ್ಪಷ್ಟವಾಗಿ ವಿವರಿಸಿಕೊಡುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬರುವವರೆಗೆ.
43 : 30
وَلَمَّا جَآءَهُمُ ٱلْحَقُّ قَالُوا۟ هَـٰذَا سِحْرٌ وَإِنَّا بِهِۦ كَـٰفِرُونَ
ಸತ್ಯವು ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದು ಮಾಟಗಾರಿಕೆಯಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ನಿಷೇಧಿಸುತ್ತೇವೆ.”
43 : 31
وَقَالُوا۟ لَوْلَا نُزِّلَ هَـٰذَا ٱلْقُرْءَانُ عَلَىٰ رَجُلٍ مِّنَ ٱلْقَرْيَتَيْنِ عَظِيمٍ
ಅವರು ಕೇಳಿದರು: “ಈ ಎರಡು ಊರುಗಳಲ್ಲಿರುವ (ಮಕ್ಕಾ ಮತ್ತು ತಾಯಿಫ್) ಯಾರಾದರೂ ಒಬ್ಬ ಮಹಾಪುರುಷನ ಮೇಲೆ ಈ ಕುರ್‌ಆನ್ ಏಕೆ ಅವತೀರ್ಣವಾಗಲಿಲ್ಲ?”
43 : 32
أَهُمْ يَقْسِمُونَ رَحْمَتَ رَبِّكَ ۚ نَحْنُ قَسَمْنَا بَيْنَهُم مَّعِيشَتَهُمْ فِى ٱلْحَيَوٰةِ ٱلدُّنْيَا ۚ وَرَفَعْنَا بَعْضَهُمْ فَوْقَ بَعْضٍ دَرَجَـٰتٍ لِّيَتَّخِذَ بَعْضُهُم بَعْضًا سُخْرِيًّا ۗ وَرَحْمَتُ رَبِّكَ خَيْرٌ مِّمَّا يَجْمَعُونَ
ಇವರೇ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯನ್ನು ಪಾಲು ಮಾಡುವವರು? ಇಹಲೋಕದಲ್ಲಿ ನಾವೇ ಅವರ ಉಪಜೀವನವನ್ನು ಅವರ ನಡುವೆ ಹಂಚಿದ್ದೇವೆ. ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಕೆಳದರ್ಜೆಯವರನ್ನಾಗಿ ಮಾಡಿಕೊಳ್ಳಲು ನಾವು ಅವರಲ್ಲಿ ಕೆಲವರಿಗೆ ಇತರರಿಗಿಂತ ಉನ್ನತ ಸ್ಥಾನಮಾನವನ್ನು ನೀಡಿದ್ದೇವೆ. ಅವರು ಸಂಗ್ರಹಿಸಿಡುವ ಎಲ್ಲಾ ವಸ್ತುಗಳಿಗಿಂತಲೂ ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯು ಶ್ರೇಷ್ಠವಾಗಿದೆ.
43 : 33
وَلَوْلَآ أَن يَكُونَ ٱلنَّاسُ أُمَّةً وَٰحِدَةً لَّجَعَلْنَا لِمَن يَكْفُرُ بِٱلرَّحْمَـٰنِ لِبُيُوتِهِمْ سُقُفًا مِّن فِضَّةٍ وَمَعَارِجَ عَلَيْهَا يَظْهَرُونَ
ಮನುಷ್ಯರೆಲ್ಲರೂ ಒಂದೇ (ಸತ್ಯನಿಷೇಧಿ) ಸಮುದಾಯವಾಗಿ ಮಾರ್ಪಡಲಾರರು ಎಂದಿದ್ದರೆ ಪರಮ ದಯಾಮಯನನ್ನು (ಅಲ್ಲಾಹನನ್ನು) ನಿಷೇಧಿಸುವವರ ಮನೆಗಳಿಗೆ ನಾವು ಬೆಳ್ಳಿಯ ಛಾವಣಿಗಳನ್ನು ಮತ್ತು ಮೇಲೇರಲು (ಬೆಳ್ಳಿಯ) ಮಟ್ಟಿಲುಗಳನ್ನು ನಿರ್ಮಿಸಿಕೊಡುತ್ತಿದ್ದೆವು.
43 : 34
وَلِبُيُوتِهِمْ أَبْوَٰبًا وَسُرُرًا عَلَيْهَا يَتَّكِـُٔونَ
ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲುಗಳನ್ನು ಮತ್ತು ಒರಗಿ ಕೂರಲು (ಬೆಳ್ಳಿಯ) ಮಂಚಗಳನ್ನು.
43 : 35
وَزُخْرُفًا ۚ وَإِن كُلُّ ذَٰلِكَ لَمَّا مَتَـٰعُ ٱلْحَيَوٰةِ ٱلدُّنْيَا ۚ وَٱلْـَٔاخِرَةُ عِندَ رَبِّكَ لِلْمُتَّقِينَ
ಮತ್ತು ಸ್ವರ್ಣಾಲಂಕಾರಗಳನ್ನು. ಆದರೆ ಅವೆಲ್ಲವೂ ಇಹಲೋಕ ಜೀವನದ ಸವಲತ್ತುಗಳಾಗಿವೆ. ಪರಲೋಕವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ದೇವಭಯವುಳ್ಳವರಿಗೆ ಮಾತ್ರವಾಗಿದೆ.
43 : 36
وَمَن يَعْشُ عَن ذِكْرِ ٱلرَّحْمَـٰنِ نُقَيِّضْ لَهُۥ شَيْطَـٰنًا فَهُوَ لَهُۥ قَرِينٌ
ಯಾರು ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿರ್ಲಕ್ಷಿಸುತ್ತಾನೋ ಅವನಿಗೆ ನಾವು ಒಬ್ಬ ಶೈತಾನನನ್ನು ನಿಶ್ಚಯಿಸುವೆವು. ಅವನು (ಶೈತಾನನು) ಅವನ ಸಂಗಡಿಗನಾಗುವನು.
43 : 37
وَإِنَّهُمْ لَيَصُدُّونَهُمْ عَنِ ٱلسَّبِيلِ وَيَحْسَبُونَ أَنَّهُم مُّهْتَدُونَ
ಅವರು (ಶೈತಾನರು) ಅವರನ್ನು ಸನ್ಮಾರ್ಗದಿಂದ ತಡೆಯುವರು. ನಿಶ್ಚಯವಾಗಿಯೂ ನಾವು ಸನ್ಮಾರ್ಗದಲ್ಲಿದ್ದೇವೆಂದೇ ಅವರು ಭಾವಿಸುವರು.
43 : 38
حَتَّىٰٓ إِذَا جَآءَنَا قَالَ يَـٰلَيْتَ بَيْنِى وَبَيْنَكَ بُعْدَ ٱلْمَشْرِقَيْنِ فَبِئْسَ ٱلْقَرِينُ
ಎಲ್ಲಿಯವರೆಗೆಂದರೆ, ಅವನು (ಮನುಷ್ಯನು) ನಮ್ಮ ಬಳಿಗೆ ತಲುಪುವಾಗ (ತನ್ನ ಸಂಗಡಿಗನಾದ ಶೈತಾನನೊಂದಿಗೆ) ಹೇಳುವನು: “ನನ್ನ ಮತ್ತು ನಿನ್ನ ನಡುವೆ ಪೂರ್ವ ಮತ್ತು ಪಶ್ಚಿಮದಷ್ಟು ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!” ಆ ಸಂಗಡಿಗನು ಬಹಳ ನಿಕೃಷ್ಟನಾಗಿದ್ದಾನೆ!
43 : 39
وَلَن يَنفَعَكُمُ ٱلْيَوْمَ إِذ ظَّلَمْتُمْ أَنَّكُمْ فِى ٱلْعَذَابِ مُشْتَرِكُونَ
ನೀವು ಅಕ್ರಮಿಗಳಾಗಿದ್ದರೆ, ಇಂದು ನೀವೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗಿದ್ದೀರಿ ಎನ್ನುವುದು ನಿಮಗೆ ಯಾವುದೇ ಉಪಕಾರ ಮಾಡುವುದಿಲ್ಲ.
43 : 40
أَفَأَنتَ تُسْمِعُ ٱلصُّمَّ أَوْ تَهْدِى ٱلْعُمْىَ وَمَن كَانَ فِى ضَلَـٰلٍ مُّبِينٍ
ಹಾಗಾದರೆ, ಕಿವುಡರಿಗೆ ಕೇಳುವಂತೆ ಮಾಡಲು ಮತ್ತು ಕುರುಡರಿಗೆ ಹಾಗೂ ಸ್ಪಷ್ಟ ದುರ್ಮಾರ್ಗದಲ್ಲಿರುವವರಿಗೆ ದಾರಿ ತೋರಿಸಿಕೊಡಲು ನಿಮ್ಮಿಂದ ಸಾಧ್ಯವೇ?
43 : 41
فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ
ನಾವು ನಿಮ್ಮನ್ನು ಇಲ್ಲಿಂದ ಕೊಂಡೊಯ್ಯುವುದಾದರೂ ಸಹ, ನಿಶ್ಚಯವಾಗಿಯೂ ನಾವು ಅವರಿಂದ ಪ್ರತೀಕಾರ ಪಡೆಯುವೆವು.
43 : 42
أَوْ نُرِيَنَّكَ ٱلَّذِى وَعَدْنَـٰهُمْ فَإِنَّا عَلَيْهِم مُّقْتَدِرُونَ
ಅಥವಾ ಅವರಿಗೆ ನಾವು ಎಚ್ಚರಿಕೆ ನೀಡಿದ ಶಿಕ್ಷೆಯನ್ನು ನಾವು ನಿಮಗೆ ತೋರಿಸಿಕೊಡುವುದಾದರೂ ನಮಗೆ ಅವರ ಮೇಲೆ ಸಂಪೂರ್ಣ ಸಾಮರ್ಥ್ಯವಿದೆ.
43 : 43
فَٱسْتَمْسِكْ بِٱلَّذِىٓ أُوحِىَ إِلَيْكَ ۖ إِنَّكَ عَلَىٰ صِرَٰطٍ مُّسْتَقِيمٍ
ಆದ್ದರಿಂದ ನಿಮಗೆ ದೇವವಾಣಿಯ ಮೂಲಕ ನೀಡಲಾಗಿರುವುದನ್ನು ಬಿಗಿಯಾಗಿ ಹಿಡಿಯಿರಿ. ನಿಶ್ಚಯವಾಗಿಯೂ ನೀವು ನೇರಮಾರ್ಗಲ್ಲಿದ್ದೀರಿ.
43 : 44
وَإِنَّهُۥ لَذِكْرٌ لَّكَ وَلِقَوْمِكَ ۖ وَسَوْفَ تُسْـَٔلُونَ
ನಿಶ್ಚಯವಾಗಿಯೂ ಇದು ನಿಮಗೆ ಮತ್ತು ನಿಮ್ಮ ಜನರಿಗೆ ಒಂದು ಉಪದೇಶವಾಗಿದೆ. ಸದ್ಯವೇ ನಿಮ್ಮೊಡನೆ ಪ್ರಶ್ನಿಸಲಾಗುವುದು.
43 : 45
وَسْـَٔلْ مَنْ أَرْسَلْنَا مِن قَبْلِكَ مِن رُّسُلِنَآ أَجَعَلْنَا مِن دُونِ ٱلرَّحْمَـٰنِ ءَالِهَةً يُعْبَدُونَ
ನಿಮಗಿಂತ ಮೊದಲು ನಾವು ಕಳುಹಿಸಿದ ನಮ್ಮ ಸಂದೇಶವಾಹಕರೊಡನೆ ಕೇಳಿ ನೋಡಿರಿ, “ಪರಮ ದಯಾಮಯನ (ಅಲ್ಲಾಹನ) ಹೊರತು ಆರಾಧಿಸಲಾಗುವ ಒಬ್ಬ ದೇವರನ್ನು ನಾವು ನಿಶ್ಚಯಿಸಿದ್ದೇವೆಯೇ?” ಎಂದು.
43 : 46
وَلَقَدْ أَرْسَلْنَا مُوسَىٰ بِـَٔايَـٰتِنَآ إِلَىٰ فِرْعَوْنَ وَمَلَإِي۟هِۦ فَقَالَ إِنِّى رَسُولُ رَبِّ ٱلْعَـٰلَمِينَ
ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫರೋಹ ಮತ್ತು ಅವನ ಮುಖಂಡರ ಕಡೆಗೆ ಕಳುಹಿಸಿದೆವು. ಮೂಸಾ ಹೇಳಿದರು: “ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.”
43 : 47
فَلَمَّا جَآءَهُم بِـَٔايَـٰتِنَآ إِذَا هُم مِّنْهَا يَضْحَكُونَ
ಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಗಹಗಹಿಸಿ ನಗತೊಡಗಿದರು.
43 : 48
وَمَا نُرِيهِم مِّنْ ءَايَةٍ إِلَّا هِىَ أَكْبَرُ مِنْ أُخْتِهَا ۖ وَأَخَذْنَـٰهُم بِٱلْعَذَابِ لَعَلَّهُمْ يَرْجِعُونَ
ನಾವು ಅವರಿಗೆ ತೋರಿಸುತ್ತಿದ್ದ ಒಂದೊಂದು ದೃಷ್ಟಾಂತವು ಇನ್ನೊಂದು ದೃಷ್ಟಾಂತಕ್ಕಿಂತ ದೊಡ್ಡದಾಗಿತ್ತು. ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದೆವು. ಅವರು ಮರಳಿ ಬರುವುದಕ್ಕಾಗಿ.
43 : 49
وَقَالُوا۟ يَـٰٓأَيُّهَ ٱلسَّاحِرُ ٱدْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ
ಅವರು ಹೇಳಿದರು: “ಓ ಮಾಟಗಾರನೇ! ನಿನ್ನ ಪರಿಪಾಲಕನು (ಅಲ್ಲಾಹು) ನಿನಗೆ ಏನು ವಾಗ್ದಾನ ಮಾಡಿದ್ದಾನೋ ಅದರ ಮೂಲಕ ಅವನನ್ನು ಕರೆದು ನಮಗೋಸ್ಕರ ಪ್ರಾರ್ಥಿಸು. ನಿಶ್ಚಯವಾಗಿಯೂ ನಾವು ಸನ್ಮಾರ್ಗದಲ್ಲಾಗುವೆವು.”
43 : 50
فَلَمَّا كَشَفْنَا عَنْهُمُ ٱلْعَذَابَ إِذَا هُمْ يَنكُثُونَ
ಆದರೆ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ ಅಗೋ! ಅವರು ಮಾತು ತಪ್ಪುತ್ತಿದ್ದಾರೆ.
43 : 51
وَنَادَىٰ فِرْعَوْنُ فِى قَوْمِهِۦ قَالَ يَـٰقَوْمِ أَلَيْسَ لِى مُلْكُ مِصْرَ وَهَـٰذِهِ ٱلْأَنْهَـٰرُ تَجْرِى مِن تَحْتِىٓ ۖ أَفَلَا تُبْصِرُونَ
ಫರೋಹ ತನ್ನ ಜನರನ್ನು ಕರೆದು ಘೋಷಿಸಿದನು: “ಓ ನನ್ನ ಜನರೇ! ಈಜಿಪ್ಟಿನ ಸಾಮ್ರಾಜ್ಯವು ನನ್ನದಲ್ಲವೇ? ಈ ನದಿಗಳು ನನ್ನ (ಅರಮನೆಯ) ತಳಭಾಗದಿಂದ ಹರಿಯುತ್ತಿವೆ. ನೀವು ನೋಡುವುದಿಲ್ಲವೇ?
43 : 52
أَمْ أَنَا۠ خَيْرٌ مِّنْ هَـٰذَا ٱلَّذِى هُوَ مَهِينٌ وَلَا يَكَادُ يُبِينُ
ಮಾತನಾಡಲು ಕೂಡ ಸರಿಯಾಗಿ ಬರದ ಈ ಅಲ್ಪನಿಗಿಂತ ನಾನು ಶ್ರೇಷ್ಠನಲ್ಲವೇ?
43 : 53
فَلَوْلَآ أُلْقِىَ عَلَيْهِ أَسْوِرَةٌ مِّن ذَهَبٍ أَوْ جَآءَ مَعَهُ ٱلْمَلَـٰٓئِكَةُ مُقْتَرِنِينَ
ಈತನಿಗೆ ಸ್ವರ್ಣ ಕಡಗಗಳನ್ನು ಏಕೆ ತೊಡಿಸಲಾಗಿಲ್ಲ? ಅಥವಾ ಈತನಿಗೆ ಸಹಾಯಕರಾಗಿ ದೇವದೂತರು‍ಗಳು ಏಕೆ ಬಂದಿಲ್ಲ?”
43 : 54
فَٱسْتَخَفَّ قَوْمَهُۥ فَأَطَاعُوهُ ۚ إِنَّهُمْ كَانُوا۟ قَوْمًا فَـٰسِقِينَ
ಅವನು ತನ್ನ ಜನರನ್ನು ಮರುಳುಗೊಳಿಸಿದನು. ಅವರು ಅವನ ಮಾತನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು.
43 : 55
فَلَمَّآ ءَاسَفُونَا ٱنتَقَمْنَا مِنْهُمْ فَأَغْرَقْنَـٰهُمْ أَجْمَعِينَ
ಅವರು ನಮ್ಮನ್ನು ರೇಗಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.
43 : 56
فَجَعَلْنَـٰهُمْ سَلَفًا وَمَثَلًا لِّلْـَٔاخِرِينَ
ಹೀಗೆ ನಾವು ಅವರನ್ನು ಒಂದು ಪೂರ್ವ ಮಾದರಿಯಾಗಿ ಮತ್ತು ನಂತರದವರಿಗೆ ಒಂದು ಉದಾಹರಣೆಯಾಗಿ ಮಾಡಿದೆವು.
43 : 57
۞ وَلَمَّا ضُرِبَ ٱبْنُ مَرْيَمَ مَثَلًا إِذَا قَوْمُكَ مِنْهُ يَصِدُّونَ
ಮರ್ಯಮರ ಪುತ್ರನನ್ನು (ಈಸಾರನ್ನು) ಉದಾಹರಣೆಯಾಗಿ ತೋರಿಸಲಾದಾಗ ಅಗೋ! ನಿಮ್ಮ ಜನರು ಅಟ್ಟಹಾಸದಿಂದ ನಗುತ್ತಿದ್ದಾರೆ.
43 : 58
وَقَالُوٓا۟ ءَأَـٰلِهَتُنَا خَيْرٌ أَمْ هُوَ ۚ مَا ضَرَبُوهُ لَكَ إِلَّا جَدَلًۢا ۚ بَلْ هُمْ قَوْمٌ خَصِمُونَ
ಅವರು ಕೇಳಿದರು: “ನಮ್ಮ ದೇವರುಗಳು ಶ್ರೇಷ್ಠರೋ ಅಥವಾ ಅವನೋ?”[1] ಅವರು ಕೇವಲ ತರ್ಕಕ್ಕಾಗಿ ನಿಮ್ಮ ಮುಂದೆ ಅದನ್ನು ಹೇಳಿದ್ದರು. ವಾಸ್ತವವಾಗಿ, ಅವರು ಜಗಳಗಂಟಿ ಜನರಾಗಿದ್ದಾರೆ.
43 : 59
إِنْ هُوَ إِلَّا عَبْدٌ أَنْعَمْنَا عَلَيْهِ وَجَعَلْنَـٰهُ مَثَلًا لِّبَنِىٓ إِسْرَٰٓءِيلَ
ಅವರು (ಈಸಾ) ಕೇವಲ ಒಬ್ಬ ದಾಸ. ನಾವು ಅವರಿಗೆ ಅನುಗ್ರಹವನ್ನು ನೀಡಿ ಅವರನ್ನು ಇಸ್ರಾಯೇಲ್ ಮಕ್ಕಳಿಗೆ ಮಾದರಿಯಾಗಿ ಮಾಡಿದೆವು.
43 : 60
وَلَوْ نَشَآءُ لَجَعَلْنَا مِنكُم مَّلَـٰٓئِكَةً فِى ٱلْأَرْضِ يَخْلُفُونَ
ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಬದಲಿಗೆ (ಒಬ್ಬರ ನಂತರ ಒಬ್ಬರು) ಉತ್ತರಾಧಿಕಾರಿಗಳಾಗಿ ಬರುವ ದೇವದೂತರು‍ಗಳನ್ನು ಉಂಟುಮಾಡುತ್ತಿದ್ದೆವು.
43 : 61
وَإِنَّهُۥ لَعِلْمٌ لِّلسَّاعَةِ فَلَا تَمْتَرُنَّ بِهَا وَٱتَّبِعُونِ ۚ هَـٰذَا صِرَٰطٌ مُّسْتَقِيمٌ
ನಿಶ್ಚಯವಾಗಿಯೂ ಅವರು (ಈಸಾ) ಅಂತ್ಯಸಮಯದ ಒಂದು ಚಿಹ್ನೆಯಾಗಿದ್ದಾರೆ.[1] ಆದ್ದರಿಂದ ನೀವು ಅದರ (ಅಂತ್ಯಸಮಯದ) ವಿಷಯದಲ್ಲಿ ಸಂಶಯಪಡಬೇಡಿ. ನನ್ನನ್ನು ಅನುಸರಿಸಿರಿ. ಇದೇ ನೇರವಾದ ಮಾರ್ಗ.
43 : 62
وَلَا يَصُدَّنَّكُمُ ٱلشَّيْطَـٰنُ ۖ إِنَّهُۥ لَكُمْ عَدُوٌّ مُّبِينٌ
ಶೈತಾನನು ನಿಮ್ಮನ್ನು (ನೇರಮಾರ್ಗದಿಂದ) ತಡೆಯದಿರಲಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.
43 : 63
وَلَمَّا جَآءَ عِيسَىٰ بِٱلْبَيِّنَـٰتِ قَالَ قَدْ جِئْتُكُم بِٱلْحِكْمَةِ وَلِأُبَيِّنَ لَكُم بَعْضَ ٱلَّذِى تَخْتَلِفُونَ فِيهِ ۖ فَٱتَّقُوا۟ ٱللَّهَ وَأَطِيعُونِ
ಈಸಾ ಪವಾಡಗಳೊಂದಿಗೆ ಬಂದು ಹೇಳಿದರು: “ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ವಿವೇಕವನ್ನು ತಂದಿದ್ದೇನೆ. ನೀವು ಭಿನ್ನಮತ ತಳೆದಿರುವ ವಿಷಯಗಳಲ್ಲಿ ಕೆಲವನ್ನು ನಿಮಗೆ ವಿವರಿಸಿಕೊಡುವುದಕ್ಕಾಗಿ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
43 : 64
إِنَّ ٱللَّهَ هُوَ رَبِّى وَرَبُّكُمْ فَٱعْبُدُوهُ ۚ هَـٰذَا صِرَٰطٌ مُّسْتَقِيمٌ
ನಿಶ್ಚಯವಾಗಿಯೂ ಅಲ್ಲಾಹನೇ ನನ್ನ ಮತ್ತು ನಿಮ್ಮ ಪರಿಪಾಲಕನು. ಆದ್ದರಿಂದ ಅವನನ್ನೇ ಆರಾಧಿಸಿರಿ. ಇದೇ ನೇರವಾದ ಮಾರ್ಗ.”
43 : 65
فَٱخْتَلَفَ ٱلْأَحْزَابُ مِنۢ بَيْنِهِمْ ۖ فَوَيْلٌ لِّلَّذِينَ ظَلَمُوا۟ مِنْ عَذَابِ يَوْمٍ أَلِيمٍ
ನಂತರ (ಇಸ್ರಾಯೇಲರಲ್ಲಿದ್ದ) ಗುಂಪುಗಳು ಪರಸ್ಪರ ಭಿನ್ನಮತ ತಳೆದರು. ಆದ್ದರಿಂದ ಅಕ್ರಮಿಗಳಿಗೆ ಯಾತನಾಮಯ ದಿನದ ಶಿಕ್ಷೆಯಿಂದಾಗಿ ವಿನಾಶ ಕಾದಿದೆ!
43 : 66
هَلْ يَنظُرُونَ إِلَّا ٱلسَّاعَةَ أَن تَأْتِيَهُم بَغْتَةً وَهُمْ لَا يَشْعُرُونَ
ಅವರು ನಿರೀಕ್ಷಿಸದ ರೀತಿಯಲ್ಲಿ ಹಠಾತ್ತನೆ ಅಂತ್ಯಸಮಯವು ಅವರ ಬಳಿಗೆ ಬರುವುದನ್ನು ಅವರು ಕಾಯುತ್ತಿದ್ದಾರೆಯೇ?
43 : 67
ٱلْأَخِلَّآءُ يَوْمَئِذٍۭ بَعْضُهُمْ لِبَعْضٍ عَدُوٌّ إِلَّا ٱلْمُتَّقِينَ
ಅಂದು ಆಪ್ತಮಿತ್ರರು ಪರಸ್ಪರ ವೈರಿಗಳಾಗುವರು. ದೇವಭಯವುಳ್ಳವರ ಹೊರತು.
43 : 68
يَـٰعِبَادِ لَا خَوْفٌ عَلَيْكُمُ ٱلْيَوْمَ وَلَآ أَنتُمْ تَحْزَنُونَ
(ದೇವಭಯವುಳ್ಳವರೊಡನೆ ಹೇಳಲಾಗುವುದು): “ಓ ನನ್ನ ದಾಸರೇ! ಇಂದು ನಿಮಗೆ ಯಾವುದೇ ಭಯವಿಲ್ಲ. ನೀವು ದುಃಖಿಸಬೇಕಾಗಿಯೂ ಇಲ್ಲ.
43 : 69
ٱلَّذِينَ ءَامَنُوا۟ بِـَٔايَـٰتِنَا وَكَانُوا۟ مُسْلِمِينَ
ಅವರು (ದಾಸರು) ಯಾರೆಂದರೆ, ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟವರು ಮತ್ತು ಮುಸ್ಲಿಮರಾದವರು (ನನ್ನ ಆಜ್ಞೆಗಳನ್ನು ಶಿರಸಾ ಪಾಲಿಸಿದವರು).
43 : 70
ٱدْخُلُوا۟ ٱلْجَنَّةَ أَنتُمْ وَأَزْوَٰجُكُمْ تُحْبَرُونَ
ನೀವು ಮತ್ತು ನಿಮ್ಮ ಪತ್ನಿಯರು ಸಂತೋಷದಿಂದ ಸ್ವರ್ಗವನ್ನು ಪ್ರವೇಶಿಸಿರಿ.”
43 : 71
يُطَافُ عَلَيْهِم بِصِحَافٍ مِّن ذَهَبٍ وَأَكْوَابٍ ۖ وَفِيهَا مَا تَشْتَهِيهِ ٱلْأَنفُسُ وَتَلَذُّ ٱلْأَعْيُنُ ۖ وَأَنتُمْ فِيهَا خَـٰلِدُونَ
ಸ್ವರ್ಣ ಬಟ್ಟಲುಗಳನ್ನು ಮತ್ತು ಲೋಟಗಳನ್ನು ಅವರ ಸುತ್ತಲೂ ತರಲಾಗುವುದು. ಅವರ ಮನಸ್ಸುಗಳು ಬಯಸುವುದೆಲ್ಲವೂ ಮತ್ತು ಅವರ ಕಣ್ಣುಗಳಿಗೆ ಆನಂದ ನೀಡುವುದೆಲ್ಲವೂ ಅಲ್ಲಿರುವುವು. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ.
43 : 72
وَتِلْكَ ٱلْجَنَّةُ ٱلَّتِىٓ أُورِثْتُمُوهَا بِمَا كُنتُمْ تَعْمَلُونَ
ಆ ಸ್ವರ್ಗವನ್ನು ನೀವು ಮಾಡಿರುವ ಕರ್ಮಗಳ ಕಾರಣ ನಿಮಗೆ ಉತ್ತರಾಧಿಕಾರವಾಗಿ ನೀಡಲಾಗಿದೆ.
43 : 73
لَكُمْ فِيهَا فَـٰكِهَةٌ كَثِيرَةٌ مِّنْهَا تَأْكُلُونَ
ಅಲ್ಲಿ ನಿಮಗೆ ಯಥೇಷ್ಟ ಹಣ್ಣು-ಹಂಪಲುಗಳಿವೆ. ಅದರಿಂದ ನೀವು ತಿನ್ನುವಿರಿ.
43 : 74
إِنَّ ٱلْمُجْرِمِينَ فِى عَذَابِ جَهَنَّمَ خَـٰلِدُونَ
ನಿಶ್ಚಯವಾಗಿಯೂ ಅಪರಾಧಿಗಳು ನರಕದ ಶಿಕ್ಷೆಯಲ್ಲಿ ಶಾಶ್ವತವಾಗಿ ವಾಸಿಸುವರು.
43 : 75
لَا يُفَتَّرُ عَنْهُمْ وَهُمْ فِيهِ مُبْلِسُونَ
ಅದನ್ನು ಅವರಿಗೆ ಹಗುರಗೊಳಿಸಲಾಗುವುದೇ ಇಲ್ಲ. ಅವರು ಅದರಲ್ಲಿ ನಿರಾಶರಾಗಿ ಕಳೆಯುವರು.
43 : 76
وَمَا ظَلَمْنَـٰهُمْ وَلَـٰكِن كَانُوا۟ هُمُ ٱلظَّـٰلِمِينَ
ನಾವು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು.
43 : 77
وَنَادَوْا۟ يَـٰمَـٰلِكُ لِيَقْضِ عَلَيْنَا رَبُّكَ ۖ قَالَ إِنَّكُم مَّـٰكِثُونَ
ಅವರು ಕೂಗಿ ಹೇಳುವರು: “ಓ ಮಾಲಿಕ್! ನಿಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ಮುಗಿಸಿ ಬಿಡಲು ಹೇಳಿ!” ಮಾಲಿಕ್ ಹೇಳುವರು: “ನೀವು (ಶಾಶ್ವತವಾಗಿ) ಇಲ್ಲೇ ವಾಸಿಸುವಿರಿ.”
43 : 78
لَقَدْ جِئْنَـٰكُم بِٱلْحَقِّ وَلَـٰكِنَّ أَكْثَرَكُمْ لِلْحَقِّ كَـٰرِهُونَ
ನಿಶ್ಚಯವಾಗಿಯೂ ನಾವು ಸತ್ಯವನ್ನು ನಿಮ್ಮ ಬಳಿಗೆ ತಂದಿದ್ದೆವು. ಆದರೆ ನಿಮ್ಮಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಿದ್ದರು.
43 : 79
أَمْ أَبْرَمُوٓا۟ أَمْرًا فَإِنَّا مُبْرِمُونَ
ಅವರು ಯಾವುದಾದರೂ ವಿಷಯವನ್ನು ತೀರ್ಮಾನಿಸಿ ಬಿಟ್ಟಿದ್ದಾರೆಯೇ? ಹಾಗಾದರೆ ನಾವು ಕೂಡ ಒಂದು ವಿಷಯವನ್ನು ತೀರ್ಮಾನಿಸುವೆವು.
43 : 80
أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَىٰهُم ۚ بَلَىٰ وَرُسُلُنَا لَدَيْهِمْ يَكْتُبُونَ
ಅವರ ರಹಸ್ಯ ಮಾತುಗಳನ್ನು ಮತ್ತು ಗುಪ್ತ ಸಂಭಾಷಣೆಗಳನ್ನು ನಾವು ಕೇಳುತ್ತಿಲ್ಲ ಎಂದು ಅವರು ಭಾವಿಸಿದ್ದಾರೆಯೇ? ಹೌದು! ನಮ್ಮ ದೂತರು ಅವರ ಬಳಿ ದಾಖಲಿಸುತ್ತಿದ್ದಾರೆ.
43 : 81
قُلْ إِن كَانَ لِلرَّحْمَـٰنِ وَلَدٌ فَأَنَا۠ أَوَّلُ ٱلْعَـٰبِدِينَ
ಹೇಳಿರಿ: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಮಕ್ಕಳಿರುತ್ತಿದ್ದರೆ ನಾನೇ ಮೊತ್ತಮೊದಲು (ಅವರನ್ನು) ಆರಾಧಿಸುತ್ತಿದ್ದೆನು.”
43 : 82
سُبْحَـٰنَ رَبِّ ٱلسَّمَـٰوَٰتِ وَٱلْأَرْضِ رَبِّ ٱلْعَرْشِ عَمَّا يَصِفُونَ
ಭೂಮ್ಯಾಕಾಶಗಳ ಮತ್ತು ಮಹಾ ಸಿಂಹಾಸನದ ಪರಿಪಾಲಕನು (ಅಲ್ಲಾಹು) ಅವರು ಸುಳ್ಳು ಸುಳ್ಳಾಗಿ ಹೇಳುವ ಎಲ್ಲಾ ಆರೋಪಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ.
43 : 83
فَذَرْهُمْ يَخُوضُوا۟ وَيَلْعَبُوا۟ حَتَّىٰ يُلَـٰقُوا۟ يَوْمَهُمُ ٱلَّذِى يُوعَدُونَ
ಆದ್ದರಿಂದ ನೀವು ಅವರನ್ನು ಅವರ ವ್ಯರ್ಥ ಮಾತುಗಳಲ್ಲಿ ಮತ್ತು ಆಟಗಳಲ್ಲಿ ತಲ್ಲೀನರಾಗಲು ಬಿಟ್ಟುಬಿಡಿ. ಎಲ್ಲಿಯರೆಗೆಂದರೆ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಅವರು ಎದುರುಗೊಳ್ಳುವ ತನಕ.
43 : 84
وَهُوَ ٱلَّذِى فِى ٱلسَّمَآءِ إِلَـٰهٌ وَفِى ٱلْأَرْضِ إِلَـٰهٌ ۚ وَهُوَ ٱلْحَكِيمُ ٱلْعَلِيمُ
ಅವನೇ ಆಕಾಶದಲ್ಲಿರುವ ದೇವನು ಮತ್ತು ಭೂಮಿಯಲ್ಲಿಯೂ ಆರಾಧನೆಗೆ ಅರ್ಹನಾಗಿರುವವನು. ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
43 : 85
وَتَبَارَكَ ٱلَّذِى لَهُۥ مُلْكُ ٱلسَّمَـٰوَٰتِ وَٱلْأَرْضِ وَمَا بَيْنَهُمَا وَعِندَهُۥ عِلْمُ ٱلسَّاعَةِ وَإِلَيْهِ تُرْجَعُونَ
ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಯಾರದ್ದೋ ಅವನು ಸಮೃದ್ಧಪೂರ್ಣನಾಗಿದ್ದಾನೆ. ಅಂತ್ಯದಿನದ ಜ್ಞಾನವಿರುವುದು ಅವನ ಬಳಿ ಮಾತ್ರ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
43 : 86
وَلَا يَمْلِكُ ٱلَّذِينَ يَدْعُونَ مِن دُونِهِ ٱلشَّفَـٰعَةَ إِلَّا مَن شَهِدَ بِٱلْحَقِّ وَهُمْ يَعْلَمُونَ
ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ ಅವರಿಗೆ ಶಿಫಾರಸು ಮಾಡುವ ಯಾವುದೇ ಅಧಿಕಾರವಿಲ್ಲ. ಸತ್ಯಕ್ಕೆ ಸಾಕ್ಷ್ಯ ವಹಿಸಿದವರು ಮತ್ತು ಜ್ಞಾನವುಳ್ಳವರ ಹೊರತು.
43 : 87
وَلَئِن سَأَلْتَهُم مَّنْ خَلَقَهُمْ لَيَقُولُنَّ ٱللَّهُ ۖ فَأَنَّىٰ يُؤْفَكُونَ
ನೀವು ಅವರೊಡನೆ, “ಅವರನ್ನು ಸೃಷ್ಟಿಸಿದ್ದು ಯಾರು?” ಎಂದು ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು” ಎನ್ನುತ್ತಾರೆ. ಆದರೂ ಅವರನ್ನು ತಪ್ಪಿಸಲಾಗುತ್ತಿರುವುದು ಹೇಗೆ?
43 : 88
وَقِيلِهِۦ يَـٰرَبِّ إِنَّ هَـٰٓؤُلَآءِ قَوْمٌ لَّا يُؤْمِنُونَ
ಅವರು (ಪ್ರವಾದಿಯು ಹೆಚ್ಚಾಗಿ) ಹೇಳುವ ಈ ಮಾತು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಇವರು ವಿಶ್ವಾಸವಿಡದ ಜನರಾಗಿದ್ದಾರೆ.”
43 : 89
فَٱصْفَحْ عَنْهُمْ وَقُلْ سَلَـٰمٌ ۚ فَسَوْفَ يَعْلَمُونَ
ಆದ್ದರಿಂದ ನೀವು ಅವರಿಂದ ವಿಮುಖರಾಗಿ ಬಿಡಿ. ಅವರೊಡನೆ “ಸಲಾಂ” ಎಂದು ಹೇಳಿರಿ. ಅವರು ಸದ್ಯವೇ ತಿಳಿದುಕೊಳ್ಳುವರು.