28 : 1
طسٓمٓ
ತ್ವಾ-ಸೀನ್-ಮೀಮ್.
28 : 2
تِلْكَ ءَايَـٰتُ ٱلْكِتَـٰبِ ٱلْمُبِينِ
ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ.
28 : 3
نَتْلُوا۟ عَلَيْكَ مِن نَّبَإِ مُوسَىٰ وَفِرْعَوْنَ بِٱلْحَقِّ لِقَوْمٍ يُؤْمِنُونَ
ನಾವು ನಿಮಗೆ ಮೂಸಾ ಮತ್ತು ಫರೋಹ‍ನ ಸತ್ಯ ಸಮಾಚಾರವನ್ನು ತಿಳಿಸಿಕೊಡುತ್ತೇವೆ. ವಿಶ್ವಾಸವಿಡುವ ಜನರಿಗಾಗಿ.
28 : 4
إِنَّ فِرْعَوْنَ عَلَا فِى ٱلْأَرْضِ وَجَعَلَ أَهْلَهَا شِيَعًا يَسْتَضْعِفُ طَآئِفَةً مِّنْهُمْ يُذَبِّحُ أَبْنَآءَهُمْ وَيَسْتَحْىِۦ نِسَآءَهُمْ ۚ إِنَّهُۥ كَانَ مِنَ ٱلْمُفْسِدِينَ
ನಿಶ್ಚಯವಾಗಿಯೂ ಫರೋಹನು ಭೂಮಿಯಲ್ಲಿ ಅಹಂಕಾರದಿಂದ ವರ್ತಿಸಿದನು. ಅವನು ಅಲ್ಲಿನ ನಿವಾಸಿಗಳನ್ನು ಪಂಗಡಗಳಾಗಿ ವಿಭಜಿಸಿದ್ದನು. ಅವರಲ್ಲಿ ಒಂದು ಪಂಗಡವನ್ನು ಅಸಹಾಯಕರನ್ನಾಗಿ ಮಾಡಿದ್ದನು. ಅವನು ಅವರ ಗಂಡುಮಕ್ಕಳನ್ನು ಕತ್ತು ಕೊಯ್ದು ಸಾಯಿಸುತ್ತಿದ್ದನು ಮತ್ತು ಅವರ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದನು. ನಿಶ್ಚಯವಾಗಿಯೂ ಅವನು ಕಿಡಿಗೇಡಿಗಳಲ್ಲಿ ಸೇರಿದವನಾಗಿದ್ದನು.
28 : 5
وَنُرِيدُ أَن نَّمُنَّ عَلَى ٱلَّذِينَ ٱسْتُضْعِفُوا۟ فِى ٱلْأَرْضِ وَنَجْعَلَهُمْ أَئِمَّةً وَنَجْعَلَهُمُ ٱلْوَٰرِثِينَ
ನಂತರ ನಾವು ಭೂಮಿಯಲ್ಲಿ ಅಸಹಾಯಕರಾಗಿದ್ದ ಆ ಜನರ ಮೇಲೆ ಔದಾರ್ಯ ತೋರಲು, ಅವರನ್ನು ಮುಖಂಡರನ್ನಾಗಿ ಮಾಡಲು ಮತ್ತು ಅವರನ್ನು ಭೂಮಿಯ ವಾರಸುದಾರರನ್ನಾಗಿ ಮಾಡಲು ಬಯಸಿದೆವು.
28 : 6
وَنُمَكِّنَ لَهُمْ فِى ٱلْأَرْضِ وَنُرِىَ فِرْعَوْنَ وَهَـٰمَـٰنَ وَجُنُودَهُمَا مِنْهُم مَّا كَانُوا۟ يَحْذَرُونَ
ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಲು ಮತ್ತು ಫರೋಹ, ಹಾಮಾನ್ ಹಾಗೂ ಅವರ ಸೈನ್ಯಗಳು ಅವರ ಬಗ್ಗೆ ಏನನ್ನು ಭಯಪಡುತ್ತಿದ್ದರೋ ಅದನ್ನು ಅವರಿಗೆ ತೋರಿಸಿಕೊಡಲು ಬಯಸಿದೆವು.
28 : 7
وَأَوْحَيْنَآ إِلَىٰٓ أُمِّ مُوسَىٰٓ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِى ٱلْيَمِّ وَلَا تَخَافِى وَلَا تَحْزَنِىٓ ۖ إِنَّا رَآدُّوهُ إِلَيْكِ وَجَاعِلُوهُ مِنَ ٱلْمُرْسَلِينَ
ಮೂಸಾರ ತಾಯಿಗೆ ನಾವು ಹೀಗೆ ಸಂದೇಶವನ್ನು ನೀಡಿದೆವು: “ನೀವು ಮೂಸಾರಿಗೆ ಸ್ತನಪಾನ ಮಾಡಿರಿ. ಅವರ ವಿಷಯದಲ್ಲಿ ನಿಮಗೇನಾದರೂ ಭಯವಾದರೆ ಅವರನ್ನು ನದಿಯಲ್ಲಿ ಎಸೆಯಿರಿ. ನೀವು ಭಯಪಡಬೇಡಿ ಮತ್ತು ದುಃಖಿಸಬೇಡಿ. ನಿಶ್ಚಯವಾಗಿಯೂ ನಾವು ಮೂಸಾರನ್ನು ನಿಮ್ಮ ಮಡಿಲಿಗೆ ಮರಳಿಸುವೆವು ಮತ್ತು (ನಂತರ) ಅವರನ್ನು ಸಂದೇಶವಾಹಕರನ್ನಾಗಿ ಮಾಡುವೆವು.”
28 : 8
فَٱلْتَقَطَهُۥٓ ءَالُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَـٰمَـٰنَ وَجُنُودَهُمَا كَانُوا۟ خَـٰطِـِٔينَ
ನಂತರ ಫರೋಹ‍ನ ಜನರು ಮೂಸಾರನ್ನು (ನದಿಯಿಂದ) ಎತ್ತಿದರು—ಅವರು ಅವರ ವೈರಿಯಾಗಲು ಮತ್ತು ಅವರ ದುಃಖಕ್ಕೆ ಹೇತುವಾಗಲು. ನಿಶ್ಚಯವಾಗಿಯೂ ಫರೋಹ, ಹಾಮಾನ್ ಮತ್ತು ಅವರ ಸೈನ್ಯಗಳು ಪಾಪಿಗಳಾಗಿದ್ದರು.
28 : 9
وَقَالَتِ ٱمْرَأَتُ فِرْعَوْنَ قُرَّتُ عَيْنٍ لِّى وَلَكَ ۖ لَا تَقْتُلُوهُ عَسَىٰٓ أَن يَنفَعَنَآ أَوْ نَتَّخِذَهُۥ وَلَدًا وَهُمْ لَا يَشْعُرُونَ
ಫರೋಹ‍ನ ಪತ್ನಿ ಹೇಳಿದಳು: “ಇವನು ನನಗೂ, ನಿಮಗೂ ಕಣ್ಮನ ತಣಿಸುತ್ತಿದ್ದಾನೆ. ದಯವಿಟ್ಟು ಇವನನ್ನು ಕೊಲ್ಲಬೇಡಿ. ನಮಗೆ ಇವನಿಂದ ಉಪಕಾರವಾಗಬಹುದು ಅಥವಾ ನಮಗೆ ಇವನನ್ನು ಪುತ್ರನಾಗಿ ಸ್ವೀಕರಿಸಿಕೊಳ್ಳಬಹುದು.” ಅವರಿಗೆ (ನಿಜಸಂಗತಿಯೇನೆಂದು) ತಿಳಿದಿರಲಿಲ್ಲ.
28 : 10
وَأَصْبَحَ فُؤَادُ أُمِّ مُوسَىٰ فَـٰرِغًا ۖ إِن كَادَتْ لَتُبْدِى بِهِۦ لَوْلَآ أَن رَّبَطْنَا عَلَىٰ قَلْبِهَا لِتَكُونَ مِنَ ٱلْمُؤْمِنِينَ
ಮೂಸಾರ ತಾಯಿಯ ಹೃದಯವು ಬರಿದಾಯಿತು. ನಾವು ಅವಳಿಗೆ ಮಾನಸಿಕ ಸ್ಥೈರ್ಯವನ್ನು ನೀಡದಿರುತ್ತಿದ್ದರೆ ಅವಳು ಮೂಸಾರ ಸಮಾಚಾರವನ್ನು ಬಹಿರಂಗಪಡಿಸಿಯೇ ಬಿಡುತ್ತಿದ್ದಳು. ಅವಳು ದೃಢವಿಶ್ವಾಸಿಗಳಲ್ಲಿ ಸೇರಲೆಂದು (ನಾವು ಅವಳಿಗೆ ಸ್ಥೈರ್ಯವನ್ನು ನೀಡಿದೆವು).
28 : 11
وَقَالَتْ لِأُخْتِهِۦ قُصِّيهِ ۖ فَبَصُرَتْ بِهِۦ عَن جُنُبٍ وَهُمْ لَا يَشْعُرُونَ
ಮೂಸಾರ ತಾಯಿ ಅವರ ಸಹೋದರಿಯೊಡನೆ ಹೇಳಿದಳು: “ನೀನು ಅವನ ಹಿಂದೆಯೇ ಹೋಗು.” ಅವಳು (ಸಹೋದರಿ) ಅವರಿಗೆ ತಿಳಿಯದಂತೆಯೇ ದೂರದಿಂದ ಮೂಸಾರನ್ನು ಗಮನಿಸುತ್ತಿದ್ದಳು.
28 : 12
۞ وَحَرَّمْنَا عَلَيْهِ ٱلْمَرَاضِعَ مِن قَبْلُ فَقَالَتْ هَلْ أَدُلُّكُمْ عَلَىٰٓ أَهْلِ بَيْتٍ يَكْفُلُونَهُۥ لَكُمْ وَهُمْ لَهُۥ نَـٰصِحُونَ
ಇದಕ್ಕೆ ಮೊದಲೇ ನಾವು ದಾದಿಯರ ಮೊಲೆಹಾಲು ಕುಡಿಯದಂತೆ ಮೂಸಾರನ್ನು ತಡೆದಿದ್ದೆವು.[1] ಅವಳು (ಸಹೋದರಿ) ಹೇಳಿದಳು: “ನಿಮ್ಮ ಪರವಾಗಿ ಈ ಮಗುವನ್ನು ಸಾಕುವ ಮತ್ತು ಈ ಮಗುವಿನ ಹಿತಚಿಂತನೆ ಮಾಡುವ ಒಂದು ಮನೆಯವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?”
28 : 13
فَرَدَدْنَـٰهُ إِلَىٰٓ أُمِّهِۦ كَىْ تَقَرَّ عَيْنُهَا وَلَا تَحْزَنَ وَلِتَعْلَمَ أَنَّ وَعْدَ ٱللَّهِ حَقٌّ وَلَـٰكِنَّ أَكْثَرَهُمْ لَا يَعْلَمُونَ
ಹೀಗೆ ನಾವು ಮೂಸಾರನ್ನು ಅವರ ತಾಯಿಗೆ—ಅವಳ ಕಣ್ಣು ತಂಪಾಗಲು, ಅವಳು ದುಃಖಿಸದಿರಲು ಮತ್ತು ಅಲ್ಲಾಹನ ವಾಗ್ದಾನವು ಸತ್ಯವೆಂದು ಅವಳಿಗೆ ಮನವರಿಕೆಯಾಗಲು—ಹಿಂದಿರುಗಿಸಿದೆವು. ಆದರೆ ಜನರಲ್ಲಿ ಹೆಚ್ಚಿನವರು ಇದನ್ನು ತಿಳಿದಿಲ್ಲ.
28 : 14
وَلَمَّا بَلَغَ أَشُدَّهُۥ وَٱسْتَوَىٰٓ ءَاتَيْنَـٰهُ حُكْمًا وَعِلْمًا ۚ وَكَذَٰلِكَ نَجْزِى ٱلْمُحْسِنِينَ
ನಂತರ ಮೂಸಾ ಪ್ರೌಢಾವಸ್ಥೆಗೆ ತಲುಪಿ ಪೂರ್ಣ ಬಲವನ್ನು ಪಡೆದಾಗ, ನಾವು ಅವರಿಗೆ ವಿವೇಕ ಮತ್ತು ಜ್ಞಾನವನ್ನು ನೀಡಿದೆವು. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.
28 : 15
وَدَخَلَ ٱلْمَدِينَةَ عَلَىٰ حِينِ غَفْلَةٍ مِّنْ أَهْلِهَا فَوَجَدَ فِيهَا رَجُلَيْنِ يَقْتَتِلَانِ هَـٰذَا مِن شِيعَتِهِۦ وَهَـٰذَا مِنْ عَدُوِّهِۦ ۖ فَٱسْتَغَـٰثَهُ ٱلَّذِى مِن شِيعَتِهِۦ عَلَى ٱلَّذِى مِنْ عَدُوِّهِۦ فَوَكَزَهُۥ مُوسَىٰ فَقَضَىٰ عَلَيْهِ ۖ قَالَ هَـٰذَا مِنْ عَمَلِ ٱلشَّيْطَـٰنِ ۖ إِنَّهُۥ عَدُوٌّ مُّضِلٌّ مُّبِينٌ
ನಗರವಾಸಿಗಳು ನಿರ್ಲಕ್ಷ್ಯರಾಗಿದ್ದ (ವಿಶ್ರಾಂತಿ ಪಡೆಯುತ್ತಿದ್ದ) ಸಮಯದಲ್ಲಿ ಮೂಸಾ ನಗರಕ್ಕೆ ಬಂದರು. ಅಲ್ಲಿ ಇಬ್ಬರು ಹೊಡೆದಾಡುವುದನ್ನು ಅವರು ಕಂಡರು. ಒಬ್ಬ ಅವರ ಜನರಲ್ಲಿ ಸೇರಿದವನಾಗಿದ್ದರೆ, ಇನ್ನೊಬ್ಬ ಅವರ ವೈರಿಗಳಲ್ಲಿ ಸೇರಿದವನಾಗಿದ್ದನು. ಆಗ ಅವರ ಜನರಲ್ಲಿ ಸೇರಿದವನು ಅವರ ವೈರಿಗಳಲ್ಲಿ ಸೇರಿದವನ ವಿರುದ್ಧ ಮೂಸಾರೊಡನೆ ಸಹಾಯ ಬೇಡಿದನು. ಮೂಸಾ ಮುಷ್ಠಿ ಬಿಗಿಹಿಡಿದು ಅವನಿಗೆ ಥಳಿಸಿದರು. ಅದು ಅವನ ಕಥೆಯನ್ನು ಮುಗಿಸಿತು. ಮೂಸಾ ಹೇಳಿದರು: “ಇದು ಶೈತಾನನ ಕೃತ್ಯಗಳಲ್ಲಿ ಸೇರಿದ್ದು. ಅವನು ದಾರಿತಪ್ಪಿಸುವ ಸ್ಪಷ್ಟ ಶತ್ರುವಾಗಿದ್ದಾನೆ.”
28 : 16
قَالَ رَبِّ إِنِّى ظَلَمْتُ نَفْسِى فَٱغْفِرْ لِى فَغَفَرَ لَهُۥٓ ۚ إِنَّهُۥ هُوَ ٱلْغَفُورُ ٱلرَّحِيمُ
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ಆದ್ದರಿಂದ ನನ್ನನ್ನು ಕ್ಷಮಿಸು.” ಆಗ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
28 : 17
قَالَ رَبِّ بِمَآ أَنْعَمْتَ عَلَىَّ فَلَنْ أَكُونَ ظَهِيرًا لِّلْمُجْرِمِينَ
ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ನನಗೆ ಅನುಗ್ರಹಗಳನ್ನು ದಯಪಾಲಿಸಿರುವ ಕಾರಣ ಇನ್ನು ಮುಂದೆ ನಾನು ಯಾವುದೇ ಅಪರಾಧಿಗಳಿಗೂ ಸಹಾಯ ಮಾಡುವುದಿಲ್ಲ.”
28 : 18
فَأَصْبَحَ فِى ٱلْمَدِينَةِ خَآئِفًا يَتَرَقَّبُ فَإِذَا ٱلَّذِى ٱسْتَنصَرَهُۥ بِٱلْأَمْسِ يَسْتَصْرِخُهُۥ ۚ قَالَ لَهُۥ مُوسَىٰٓ إِنَّكَ لَغَوِىٌّ مُّبِينٌ
ಬೆಳಗಾಗುತ್ತಿದ್ದಂತೆ, ಮೂಸಾ ಭಯದೊಂದಿಗೆ (ಜನರು ತನ್ನ ಬಗ್ಗೆ ಏನು ಹೇಳುತ್ತಾರೆಂಬ) ಸುದ್ದಿಗಳನ್ನು ನಿರೀಕ್ಷಿಸುತ್ತಾ ನಗರಕ್ಕೆ ಬಂದರು. ಆಗ ಅಗೋ! ನಿನ್ನೆ ಅವರೊಡನೆ ಸಹಾಯ ಕೇಳಿದ ಅದೇ ವ್ಯಕ್ತಿ ಪುನಃ ಅವರನ್ನು ಸಹಾಯಕ್ಕಾಗಿ ಕೂಗುತ್ತಿದ್ದಾನೆ! ಮೂಸಾ ಅವನೊಡನೆ ಹೇಳಿದರು: “ನೀನೊಬ್ಬ ಸ್ಪಷ್ಟ ದುರ್ಮಾರ್ಗಿಯಾಗಿರುವೆ.”
28 : 19
فَلَمَّآ أَنْ أَرَادَ أَن يَبْطِشَ بِٱلَّذِى هُوَ عَدُوٌّ لَّهُمَا قَالَ يَـٰمُوسَىٰٓ أَتُرِيدُ أَن تَقْتُلَنِى كَمَا قَتَلْتَ نَفْسًۢا بِٱلْأَمْسِ ۖ إِن تُرِيدُ إِلَّآ أَن تَكُونَ جَبَّارًا فِى ٱلْأَرْضِ وَمَا تُرِيدُ أَن تَكُونَ مِنَ ٱلْمُصْلِحِينَ
ನಂತರ ಮೂಸಾ ತಮ್ಮಿಬ್ಬರ ವೈರಿಯನ್ನು ಹಿಡಿಯಲು ಉದ್ದೇಶಿಸಿದಾಗ ಅವನು ಹೇಳಿದನು: “ಮೂಸಾ! ನೀನು ನಿನ್ನೆ ಒಬ್ಬನನ್ನು ಕೊಂದಂತೆ ಇಂದು ನನ್ನನ್ನು ಕೊಲ್ಲಲು ಬಯಸುತ್ತೀಯಾ? ನೀನು ನಾಡಿನಲ್ಲಿ ಕ್ರೂರಿಯಾಗಲು ಬಯಸುತ್ತಿರುವೆಯೇ ಹೊರತು ಸುಧಾರಣೆ ಮಾಡುವವರಲ್ಲಿ ಸೇರಲು ಬಯಸುತ್ತಿಲ್ಲ.”
28 : 20
وَجَآءَ رَجُلٌ مِّنْ أَقْصَا ٱلْمَدِينَةِ يَسْعَىٰ قَالَ يَـٰمُوسَىٰٓ إِنَّ ٱلْمَلَأَ يَأْتَمِرُونَ بِكَ لِيَقْتُلُوكَ فَٱخْرُجْ إِنِّى لَكَ مِنَ ٱلنَّـٰصِحِينَ
ಆಗ ನಗರ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡಿ ಬಂದು ಹೇಳಿದನು: “ಮೂಸಾ! ನಿಮ್ಮನ್ನು ಕೊಲ್ಲಲು ಮುಖಂಡರು ತಂತ್ರಗಾರಿಕೆ ಮಾಡುತ್ತಿದ್ದಾರೆ. ನೀವು ಇಲ್ಲಿಂದ ಹೊರಡಿ. ನಿಜಕ್ಕೂ ನಾನು ನಿಮ್ಮ ಹಿತಚಿಂತಕರಲ್ಲಿ ಒಬ್ಬನಾಗಿದ್ದೇನೆ.”
28 : 21
فَخَرَجَ مِنْهَا خَآئِفًا يَتَرَقَّبُ ۖ قَالَ رَبِّ نَجِّنِى مِنَ ٱلْقَوْمِ ٱلظَّـٰلِمِينَ
ಆಗ ಮೂಸಾ ಭಯದಿಂದ ಮತ್ತು ಎಚ್ಚರಿಕೆಯಿಂದ ಅಲ್ಲಿಂದ ಹೊರಟರು. ಅವರು ಹೇಳಿದರು: “ನನ್ನ ಪರಿಪಾಲಕನೇ! ಅಕ್ರಮಿಗಳಾದ ಈ ಜನರಿಂದ ನನ್ನನ್ನು ಕಾಪಾಡು.”
28 : 22
وَلَمَّا تَوَجَّهَ تِلْقَآءَ مَدْيَنَ قَالَ عَسَىٰ رَبِّىٓ أَن يَهْدِيَنِى سَوَآءَ ٱلسَّبِيلِ
ನಂತರ ಅವರು ಮದ್ಯನ್‍ ದೇಶದ ದಿಕ್ಕಿಗೆ ತಿರುಗಿದಾಗ, ಅವರು ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ನನ್ನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವನೆಂದು ನನಗೆ ಭರವಸೆಯಿದೆ.”
28 : 23
وَلَمَّا وَرَدَ مَآءَ مَدْيَنَ وَجَدَ عَلَيْهِ أُمَّةً مِّنَ ٱلنَّاسِ يَسْقُونَ وَوَجَدَ مِن دُونِهِمُ ٱمْرَأَتَيْنِ تَذُودَانِ ۖ قَالَ مَا خَطْبُكُمَا ۖ قَالَتَا لَا نَسْقِى حَتَّىٰ يُصْدِرَ ٱلرِّعَآءُ ۖ وَأَبُونَا شَيْخٌ كَبِيرٌ
ಅವರು ಮದ್ಯನ್ ದೇಶದ ಜಲಾಶಯದ ಬಳಿಗೆ ತಲುಪಿದಾಗ, ಅಲ್ಲಿ ತಮ್ಮ ಕುರಿಮಂದೆಗೆ ನೀರುಣಿಸುತ್ತಿರುವ ಜನರ ಗುಂಪನ್ನು ಕಂಡರು. ಅಲ್ಲಿ ಇಬ್ಬರು ಯುವತಿಯರು (ತಮ್ಮ ಕುರಿಮಂದೆಯನ್ನು) ತಡೆದು ನಿಂತಿರುವುದನ್ನೂ ಕಂಡರು. ಅವರು ಕೇಳಿದರು: “ನೀವೇನು ಮಾಡುತ್ತಿದ್ದೀರಿ?” ಆ ಯುವತಿಯರು ಉತ್ತರಿಸಿದರು: “ಈ ಕುರಿಗಾಹಿಗಳು ಇಲ್ಲಿಂದ ಹೊರಟು ಹೋಗುವ ತನಕ ನಮಗೆ ನೀರುಣಿಸಲು ಆಗುವುದಿಲ್ಲ. ನಮ್ಮ ತಂದೆ ವಯೋವೃದ್ಧರಾಗಿದ್ದಾರೆ.”[1]
28 : 24
فَسَقَىٰ لَهُمَا ثُمَّ تَوَلَّىٰٓ إِلَى ٱلظِّلِّ فَقَالَ رَبِّ إِنِّى لِمَآ أَنزَلْتَ إِلَىَّ مِنْ خَيْرٍ فَقِيرٌ
ಮೂಸಾ ಅವರ ಕುರಿಗಳಿಗೆ ನೀರುಣಿಸಿದರು. ನಂತರ ನೆರಳಿಗೆ ಹಿಂದಿರುಗಿ ಬಂದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನೀನು ಯಾವುದೇ ಒಳಿತನ್ನು ನನಗೆ ದಯಪಾಲಿಸಿದರೂ ನನಗೆ ಅದರ ಆವಶ್ಯಕತೆ ಇದ್ದೇ ಇದೆ.”
28 : 25
فَجَآءَتْهُ إِحْدَىٰهُمَا تَمْشِى عَلَى ٱسْتِحْيَآءٍ قَالَتْ إِنَّ أَبِى يَدْعُوكَ لِيَجْزِيَكَ أَجْرَ مَا سَقَيْتَ لَنَا ۚ فَلَمَّا جَآءَهُۥ وَقَصَّ عَلَيْهِ ٱلْقَصَصَ قَالَ لَا تَخَفْ ۖ نَجَوْتَ مِنَ ٱلْقَوْمِ ٱلظَّـٰلِمِينَ
ಆಗ ಆ ಇಬ್ಬರು ಯುವತಿಯರಲ್ಲಿ ಒಬ್ಬಳು ಸಂಕೋಚದಿಂದ ನಡೆಯುತ್ತಾ ಬಂದು ಹೇಳಿದಳು: “ನೀವು ನಮ್ಮ ಕುರಿಗಳಿಗೆ ನೀರುಣಿಸಿದ್ದಕ್ಕೆ ಪ್ರತಿಫಲ ನೀಡಲು ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ.” ಮೂಸಾ ಅವಳ ತಂದೆಯ ಬಳಿಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದಾಗ, ತಂದೆ ಹೇಳಿದರು: “ಭಯಪಡಬೇಡಿ! ನೀವು ಆ ದುಷ್ಟ ಜನರಿಂದ ಪಾರಾಗಿದ್ದೀರಿ.”
28 : 26
قَالَتْ إِحْدَىٰهُمَا يَـٰٓأَبَتِ ٱسْتَـْٔجِرْهُ ۖ إِنَّ خَيْرَ مَنِ ٱسْتَـْٔجَرْتَ ٱلْقَوِىُّ ٱلْأَمِينُ
ಆ ಇಬ್ಬರು ಯುವತಿಯರಲ್ಲಿ ಒಬ್ಬಳು ಹೇಳಿದಳು: “ಅಪ್ಪಾಜಿ! ಇವರನ್ನು ನೌಕರಿಗೆ ನೇಮಿಸಿಕೊಳ್ಳಿ. ಏಕೆಂದರೆ, ಬಲಿಷ್ಠರು ಮತ್ತು ಪ್ರಾಮಾಣಿಕರೇ ನೀವು ನೌಕರಿಗೆ ನೇಮಿಸಿಕೊಳ್ಳುವವರಲ್ಲಿ ಅತಿಶ್ರೇಷ್ಠರು.”
28 : 27
قَالَ إِنِّىٓ أُرِيدُ أَنْ أُنكِحَكَ إِحْدَى ٱبْنَتَىَّ هَـٰتَيْنِ عَلَىٰٓ أَن تَأْجُرَنِى ثَمَـٰنِىَ حِجَجٍ ۖ فَإِنْ أَتْمَمْتَ عَشْرًا فَمِنْ عِندِكَ ۖ وَمَآ أُرِيدُ أَنْ أَشُقَّ عَلَيْكَ ۚ سَتَجِدُنِىٓ إِن شَآءَ ٱللَّهُ مِنَ ٱلصَّـٰلِحِينَ
ತಂದೆ ಹೇಳಿದರು: “ನೀವು ಎಂಟು ವರ್ಷ ನನ್ನ ನೌಕರಿ ಮಾಡಬೇಕು ಎಂಬ (ವಧುದಕ್ಷಿಣೆಯ) ಆಧಾರದಲ್ಲಿ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುತ್ತೇನೆ. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಕಡೆಯ ಉಪಕಾರವಾಗಿದೆ. ನಿಮಗೆ ಕಷ್ಟಕೊಡಲು ನಾನು ಬಯಸುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ನೀವು ನನ್ನನ್ನು ನೀತಿವಂತರಲ್ಲಿ ಒಬ್ಬನಂತೆ ಕಾಣುವಿರಿ.”
28 : 28
قَالَ ذَٰلِكَ بَيْنِى وَبَيْنَكَ ۖ أَيَّمَا ٱلْأَجَلَيْنِ قَضَيْتُ فَلَا عُدْوَٰنَ عَلَىَّ ۖ وَٱللَّهُ عَلَىٰ مَا نَقُولُ وَكِيلٌ
ಮೂಸಾ ಹೇಳಿದರು: “ಸರಿ. ಇದು ನನ್ನ ಮತ್ತು ನಿಮ್ಮ ನಡುವಿನ ನಿರ್ಧಾರವಾಗಿದೆ. ನಾನು ಈ ಎರಡು ಅವಧಿಗಳಲ್ಲಿ ಯಾವುದನ್ನು ಪೂರ್ತಿ ಮಾಡಿದರೂ ನನ್ನ ಮೇಲೆ ಅನ್ಯಾಯವಾಗಬಾರದು. ನಾವು ಹೇಳುತ್ತಿರುವ ಮಾತುಗಳಿಗೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.”
28 : 29
۞ فَلَمَّا قَضَىٰ مُوسَى ٱلْأَجَلَ وَسَارَ بِأَهْلِهِۦٓ ءَانَسَ مِن جَانِبِ ٱلطُّورِ نَارًا قَالَ لِأَهْلِهِ ٱمْكُثُوٓا۟ إِنِّىٓ ءَانَسْتُ نَارًا لَّعَلِّىٓ ءَاتِيكُم مِّنْهَا بِخَبَرٍ أَوْ جَذْوَةٍ مِّنَ ٱلنَّارِ لَعَلَّكُمْ تَصْطَلُونَ
ನಂತರ ಮೂಸಾ ಆ ಅವಧಿಯನ್ನು ಪೂರ್ತಿ ಮಾಡಿ ತಮ್ಮ ಕುಟುಂಬ ಸಮೇತ ಪ್ರಯಾಣ ಹೊರಟಾಗ, ತೂರ್ ಪರ್ವತದ ಭಾಗದಿಂದ ಒಂದು ಬೆಂಕಿಯನ್ನು ಕಂಡರು. ಅವರು ತಮ್ಮ ಕುಟುಂಬದವರೊಡನೆ ಹೇಳಿದರು: “ನೀವು ಇಲ್ಲೇ ಇರಿ. ನನಗೆ (ದೂರದಲ್ಲಿ) ಬೆಂಕಿ ಕಾಣುತ್ತಿದೆ. ನಾನು ಅಲ್ಲಿಂದ ಏನಾದರೂ ಸುದ್ದಿಯನ್ನು ತರುತ್ತೇನೆ ಅಥವಾ ಏನಾದರೂ ದೀವಟಿಗೆಯನ್ನು ಉರಿಸಿಕೊಂಡು ಬರುತ್ತೇನೆ. ಅದರಿಂದ ನಿಮಗೆ ಚಳಿ ಕಾಯಿಸಬಹುದು.”
28 : 30
فَلَمَّآ أَتَىٰهَا نُودِىَ مِن شَـٰطِئِ ٱلْوَادِ ٱلْأَيْمَنِ فِى ٱلْبُقْعَةِ ٱلْمُبَـٰرَكَةِ مِنَ ٱلشَّجَرَةِ أَن يَـٰمُوسَىٰٓ إِنِّىٓ أَنَا ٱللَّهُ رَبُّ ٱلْعَـٰلَمِينَ
ಮೂಸಾ ಅಲ್ಲಿಗೆ ತಲುಪಿದಾಗ, ಆ ಸಮೃದ್ಧ ಭೂಮಿಯಲ್ಲಿರುವ ಕಣಿವೆಯ ಬಲಭಾಗದ ಒಂದು ಮರದಿಂದ ಒಂದು ವಾಣಿ ಕೇಳಿಸಿತು: “ಮೂಸಾ! ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಾಗಿದ್ದೇನೆ.”
28 : 31
وَأَنْ أَلْقِ عَصَاكَ ۖ فَلَمَّا رَءَاهَا تَهْتَزُّ كَأَنَّهَا جَآنٌّ وَلَّىٰ مُدْبِرًا وَلَمْ يُعَقِّبْ ۚ يَـٰمُوسَىٰٓ أَقْبِلْ وَلَا تَخَفْ ۖ إِنَّكَ مِنَ ٱلْـَٔامِنِينَ
“ನೀವು ನಿಮ್ಮ ಕೋಲನ್ನು ಎಸೆಯಿರಿ.” ಆಗ ಅದೊಂದು ಸರ್ಪವೋ ಎಂಬಂತೆ ವಿಲಿವಿಲಿ ಒದ್ದಾಡುವುದನ್ನು ಕಂಡಾಗ, ಮೂಸಾ (ಭಯದಿಂದ) ಹಿಂದೆ ತಿರುಗಿ ಓಡತೊಡಗಿದರು. ಅವರು ತಿರುಗಿ ನೋಡಲೇ ಇಲ್ಲ. “ಓ ಮೂಸಾ! ಮುಂದೆ ಬನ್ನಿ! ಭಯಪಡಬೇಡಿ. ನಿಶ್ಚಯವಾಗಿಯೂ ನೀವು ನಿರ್ಭಯರಾಗಿದ್ದೀರಿ.”
28 : 32
ٱسْلُكْ يَدَكَ فِى جَيْبِكَ تَخْرُجْ بَيْضَآءَ مِنْ غَيْرِ سُوٓءٍ وَٱضْمُمْ إِلَيْكَ جَنَاحَكَ مِنَ ٱلرَّهْبِ ۖ فَذَٰنِكَ بُرْهَـٰنَانِ مِن رَّبِّكَ إِلَىٰ فِرْعَوْنَ وَمَلَإِي۟هِۦٓ ۚ إِنَّهُمْ كَانُوا۟ قَوْمًا فَـٰسِقِينَ
ನೀವು ನಿಮ್ಮ ಕೈಯನ್ನು ನಿಮ್ಮ ಅಂಗಿಯಲ್ಲಿ ವಕ್ಷಕ್ಕೆ ತೂರಿಸಿರಿ. ಆಗ ಅದಕ್ಕೆ ಯಾವುದೇ ದೋಷವುಂಟಾಗದೆ ಅದು ಬೆಳ್ಳಗೆ ಹೊಳೆಯುತ್ತಾ ಹೊರಬರುತ್ತದೆ. ನಿಮಗೆ ಭಯವಾದರೆ ನಿಮ್ಮ ತೋಳನ್ನು ನಿಮ್ಮ ದೇಹಕ್ಕೆ ಒತ್ತಿ ಹಿಡಿಯಿರಿ. ಇವೆರಡು ಫರೋಹ ಮತ್ತು ಅವನ ಜನರ ಮುಖಂಡರಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಎರಡು ಸಾಕ್ಷ್ಯಗಳಾಗಿವೆ. ನಿಶ್ಚಯವಾಗಿಯೂ ಅವರು ಮಹಾ ದುಷ್ಟ ಜನರಾಗಿದ್ದಾರೆ.”
28 : 33
قَالَ رَبِّ إِنِّى قَتَلْتُ مِنْهُمْ نَفْسًا فَأَخَافُ أَن يَقْتُلُونِ
ಮೂಸಾ ಹೇಳಿದರು: “ನನ್ನ ಪರಿಪಾಲಕನೇ! ನಾನು ಅವರಲ್ಲಿ ಒಬ್ಬನ್ನು ಕೊಂದಿದ್ದೇನೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.
28 : 34
وَأَخِى هَـٰرُونُ هُوَ أَفْصَحُ مِنِّى لِسَانًا فَأَرْسِلْهُ مَعِىَ رِدْءًا يُصَدِّقُنِىٓ ۖ إِنِّىٓ أَخَافُ أَن يُكَذِّبُونِ
ನನ್ನ ತಮ್ಮ ಹಾರೂನ್ ನನಗಿಂತಲೂ ವಾಚಾಲವಾಗಿ ಮಾತನಾಡುತ್ತಾನೆ. ಆದ್ದರಿಂದ ನನ್ನ ಸತ್ಯತೆಯನ್ನು ದೃಢೀಕರಿಸಲು ಅವನನ್ನು ನನ್ನ ಸಹಾಯಕನಾಗಿ ನನ್ನೊಡನೆ ಕಳುಹಿಸು. ಅವರು ನನ್ನನ್ನು ನಿಷೇಧಿಸುವರೆಂದು ನಿಜಕ್ಕೂ ನನಗೆ ಭಯವಾಗುತ್ತಿದೆ.”
28 : 35
قَالَ سَنَشُدُّ عَضُدَكَ بِأَخِيكَ وَنَجْعَلُ لَكُمَا سُلْطَـٰنًا فَلَا يَصِلُونَ إِلَيْكُمَا ۚ بِـَٔايَـٰتِنَآ أَنتُمَا وَمَنِ ٱتَّبَعَكُمَا ٱلْغَـٰلِبُونَ
ಅಲ್ಲಾಹು ಹೇಳಿದನು: “ನಿಮ್ಮ ಸಹೋದರನಿಂದ ನಾವು ನಿಮ್ಮ ತೋಳನ್ನು ಬಲಪಡಿಸುವೆವು ಮತ್ತು ನಿಮಗಿಬ್ಬರಿಗೂ ಮೇಲ್ಮೆಯನ್ನು ನೀಡುವೆವು. ನಿಮ್ಮ ಬಳಿಗೆ ತಲುಪಲೂ ಅವರಿಗೆ ಸಾಧ್ಯವಾಗದು. ನಮ್ಮ ದೃಷ್ಟಾಂತಗಳ ಕಾರಣದಿಂದ, ನೀವು ಮತ್ತು ನಿಮ್ಮ ಅನುಯಾಯಿಗಳೇ ಗೆಲ್ಲುವರು.”
28 : 36
فَلَمَّا جَآءَهُم مُّوسَىٰ بِـَٔايَـٰتِنَا بَيِّنَـٰتٍ قَالُوا۟ مَا هَـٰذَآ إِلَّا سِحْرٌ مُّفْتَرًى وَمَا سَمِعْنَا بِهَـٰذَا فِىٓ ءَابَآئِنَا ٱلْأَوَّلِينَ
ನಂತರ ನಮ್ಮ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಮೂಸಾ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದು ಕೃತಕವಾಗಿ ರಚಿಸಲಾದ ಒಂದು ಮಾಟಗಾರಿಕೆಯಾಗಿದೆ. ನಾವು ನಮ್ಮ ಪೂರ್ವಜರ ಕಾಲದಿಂದ ಇಂತಹ ಒಂದನ್ನು ಕೇಳಿಯೇ ಇಲ್ಲ.”
28 : 37
وَقَالَ مُوسَىٰ رَبِّىٓ أَعْلَمُ بِمَن جَآءَ بِٱلْهُدَىٰ مِنْ عِندِهِۦ وَمَن تَكُونُ لَهُۥ عَـٰقِبَةُ ٱلدَّارِ ۖ إِنَّهُۥ لَا يُفْلِحُ ٱلظَّـٰلِمُونَ
ಮೂಸಾ ಹೇಳಿದರು: “ತನ್ನ ಕಡೆಯಿಂದ ಸನ್ಮಾರ್ಗದೊಂದಿಗೆ ಬಂದವರು ಯಾರು ಮತ್ತು ಪರಲೋಕದ ಅಂತಿಮ ಫಲಿತಾಂಶವು ಯಾರ ಪಾಲಿಗೆ ಒಳಿತಾಗಿರುತ್ತದೆಯೆಂದು ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.”
28 : 38
وَقَالَ فِرْعَوْنُ يَـٰٓأَيُّهَا ٱلْمَلَأُ مَا عَلِمْتُ لَكُم مِّنْ إِلَـٰهٍ غَيْرِى فَأَوْقِدْ لِى يَـٰهَـٰمَـٰنُ عَلَى ٱلطِّينِ فَٱجْعَل لِّى صَرْحًا لَّعَلِّىٓ أَطَّلِعُ إِلَىٰٓ إِلَـٰهِ مُوسَىٰ وَإِنِّى لَأَظُنُّهُۥ مِنَ ٱلْكَـٰذِبِينَ
ಫರೋಹ ಹೇಳಿದನು: “ಮುಖಂಡರೇ! ನಿಮಗೆ ನನ್ನ ಹೊರತು ಬೇರೆ ದೇವರು ಇದ್ದಾನೆಂದು ನನಗೆ ತಿಳಿದಿಲ್ಲ. ಓ ಹಾಮಾನ್! ನನಗೆ ಜೇಡಿಮಣ್ಣನ್ನು ಸುಟ್ಟು (ಇಟ್ಟಿಗೆಗಳನ್ನು) ಮಾಡಿಕೊಡು. ನಂತರ ನನಗೆ ಒಂದು ಎತ್ತರದ ಗೋಪುರವನ್ನು ನಿರ್ಮಿಸಿಕೊಡು. ನಾನು (ಅದನ್ನು ಏರಿ) ಮೂಸಾನ ದೇವನನ್ನು ಒಮ್ಮೆ ಇಣುಕಿ ನೋಡಬೇಕು. ಖಂಡಿತವಾಗಿಯೂ ಅವನು ಸುಳ್ಳು ಹೇಳುವವರಲ್ಲಿ ಸೇರಿದವನೆಂದು ನಾನು ಭಾವಿಸುತ್ತೇನೆ.”
28 : 39
وَٱسْتَكْبَرَ هُوَ وَجُنُودُهُۥ فِى ٱلْأَرْضِ بِغَيْرِ ٱلْحَقِّ وَظَنُّوٓا۟ أَنَّهُمْ إِلَيْنَا لَا يُرْجَعُونَ
ಅವನು ಮತ್ತು ಅವನ ಸೈನ್ಯಗಳು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರಿದರು. ಅವರನ್ನು ನಮ್ಮ ಬಳಿಗೆ ಮರಳಿಸಲಾಗುವುದಿಲ್ಲವೆಂದೇ ಅವರು ಭಾವಿಸಿದರು.
28 : 40
فَأَخَذْنَـٰهُ وَجُنُودَهُۥ فَنَبَذْنَـٰهُمْ فِى ٱلْيَمِّ ۖ فَٱنظُرْ كَيْفَ كَانَ عَـٰقِبَةُ ٱلظَّـٰلِمِينَ
ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯವನ್ನು ಹಿಡಿದು ಸಮುದ್ರಕ್ಕೆಸೆದೆವು. ಆ ದುಷ್ಟರ ಅಂತಿಮ ಫಲಿತಾಂಶವು ಹೇಗಿತ್ತೆಂದು ನೋಡಿರಿ.
28 : 41
وَجَعَلْنَـٰهُمْ أَئِمَّةً يَدْعُونَ إِلَى ٱلنَّارِ ۖ وَيَوْمَ ٱلْقِيَـٰمَةِ لَا يُنصَرُونَ
ನಾವು ಅವರನ್ನು ನರಕಾಗ್ನಿಗೆ ಆಮಂತ್ರಿಸುವ ಮುಖಂಡರನ್ನಾಗಿ ಮಾಡಿದೆವು. ಪುನರುತ್ಥಾನದ ದಿನದಂದು ಅವರಿಗೆ ಯಾವುದೇ ಸಹಾಯವಿರುವುದಿಲ್ಲ.
28 : 42
وَأَتْبَعْنَـٰهُمْ فِى هَـٰذِهِ ٱلدُّنْيَا لَعْنَةً ۖ وَيَوْمَ ٱلْقِيَـٰمَةِ هُم مِّنَ ٱلْمَقْبُوحِينَ
ಇಹಲೋಕದಲ್ಲೇ ಶಾಪವು ಅವರನ್ನು ಹಿಂಬಾಲಿಸುವಂತೆ ನಾವು ಮಾಡಿದ್ದೇವೆ. ಪುನರುತ್ಥಾನದ ದಿನದಂದು ಅವರು ನಿಕೃಷ್ಟ ಜನರಲ್ಲಿ ಸೇರುವರು.
28 : 43
وَلَقَدْ ءَاتَيْنَا مُوسَى ٱلْكِتَـٰبَ مِنۢ بَعْدِ مَآ أَهْلَكْنَا ٱلْقُرُونَ ٱلْأُولَىٰ بَصَآئِرَ لِلنَّاسِ وَهُدًى وَرَحْمَةً لَّعَلَّهُمْ يَتَذَكَّرُونَ
ನಾವು ಪೂರ್ವ ತಲೆಮಾರುಗಳನ್ನು ನಾಶ ಮಾಡಿದ ಬಳಿಕ, ಜನರಿಗೆ ಪುರಾವೆ, ಮಾರ್ಗದರ್ಶಿ ಮತ್ತು ದಯೆಯಾಗಿ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರು ಉಪದೇಶವನ್ನು ಸ್ವೀಕರಿಸಲೆಂದು.
28 : 44
وَمَا كُنتَ بِجَانِبِ ٱلْغَرْبِىِّ إِذْ قَضَيْنَآ إِلَىٰ مُوسَى ٱلْأَمْرَ وَمَا كُنتَ مِنَ ٱلشَّـٰهِدِينَ
(ಪ್ರವಾದಿಯವರೇ) ನಾವು ಮೂಸಾರಿಗೆ ಆಜ್ಞಾದೇಶಗಳ ಬಗ್ಗೆ ದೇವವಾಣಿ ನೀಡಿದಾಗ ನೀವು ಆ ಪರ್ವತದ ಪಶ್ಚಿಮ ಭಾಗದಲ್ಲಿರಲಿಲ್ಲ. (ಆ ಘಟನೆಗೆ) ಸಾಕ್ಷಿಯಾದವರಲ್ಲೂ ನೀವಿರಲಿಲ್ಲ.
28 : 45
وَلَـٰكِنَّآ أَنشَأْنَا قُرُونًا فَتَطَاوَلَ عَلَيْهِمُ ٱلْعُمُرُ ۚ وَمَا كُنتَ ثَاوِيًا فِىٓ أَهْلِ مَدْيَنَ تَتْلُوا۟ عَلَيْهِمْ ءَايَـٰتِنَا وَلَـٰكِنَّا كُنَّا مُرْسِلِينَ
ಆದರೆ ನಾವು (ಮೂಸಾರ ನಂತರ) ಅನೇಕ ತಲೆಮಾರುಗಳನ್ನು ಬೆಳೆಸಿದೆವು. ಅವರ ಮೂಲಕ ದೀರ್ಘ ಕಾಲಗಳು ಕಳೆದುಹೋದವು. ಮದ್ಯನ್‍ ದೇಶದವರಿಗೆ ನಮ್ಮ ವಚನಗಳನ್ನು ಓದಿಕೊಡುತ್ತಾ ನೀವು ಅವರೊಂದಿಗೆ ವಾಸವಾಗಿರಲಿಲ್ಲ. ಆದರೆ ನಿಶ್ಚಯವಾಗಿಯೂ ನಾವು ಸಂದೇಶವಾಹಕರನ್ನು ಕಳುಹಿಸುವವರಾಗಿದ್ದೇವೆ.
28 : 46
وَمَا كُنتَ بِجَانِبِ ٱلطُّورِ إِذْ نَادَيْنَا وَلَـٰكِن رَّحْمَةً مِّن رَّبِّكَ لِتُنذِرَ قَوْمًا مَّآ أَتَىٰهُم مِّن نَّذِيرٍ مِّن قَبْلِكَ لَعَلَّهُمْ يَتَذَكَّرُونَ
ನಾವು (ಮೂಸಾರನ್ನು) ಕರೆದ ಸಂದರ್ಭದಲ್ಲಿ ನೀವು ತೂರ್ ಪರ್ವತದ ಭಾಗದಲ್ಲಿರಲಿಲ್ಲ. ಆದರೆ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ದಯೆಯಾಗಿದೆ. ನಿಮಗಿಂತ ಮೊದಲು ಯಾವುದೇ ಮುನ್ನೆಚ್ಚರಿಕೆಗಾರರು ಬಂದಿರದ ಈ ಜನರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ. ಅವರು ಉಪದೇಶವನ್ನು ಸ್ವೀಕರಿಸಲೆಂದು.
28 : 47
وَلَوْلَآ أَن تُصِيبَهُم مُّصِيبَةٌۢ بِمَا قَدَّمَتْ أَيْدِيهِمْ فَيَقُولُوا۟ رَبَّنَا لَوْلَآ أَرْسَلْتَ إِلَيْنَا رَسُولًا فَنَتَّبِعَ ءَايَـٰتِكَ وَنَكُونَ مِنَ ٱلْمُؤْمِنِينَ
ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ದುಷ್ಕರ್ಮಗಳ ಫಲವಾಗಿ ಅವರಿಗೇನಾದರೂ ಅನಾಹುತ ಸಂಭವಿಸಿದರೆ, “ಓ ನಮ್ಮ ಪರಿಪಾಲಕನೇ! ನಮ್ಮ ಬಳಿಗೆ ಒಬ್ಬ ಸಂದೇಶವಾಹಕರನ್ನು ಏಕೆ ಕಳುಹಿಸಲಿಲ್ಲ, ಹಾಗಿರುತ್ತಿದ್ದರೆ ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು ಮತ್ತು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು” ಎಂದು ಅವರು ಹೇಳಲಾರರು ಎಂದಿರುತ್ತಿದ್ದರೆ (ನಾವು ನಿಮ್ಮನ್ನು ಅವರಿಗೆ ಸಂದೇಶವಾಹಕರಾಗಿ ಕಳುಹಿಸುತ್ತಿರಲಿಲ್ಲ).
28 : 48
فَلَمَّا جَآءَهُمُ ٱلْحَقُّ مِنْ عِندِنَا قَالُوا۟ لَوْلَآ أُوتِىَ مِثْلَ مَآ أُوتِىَ مُوسَىٰٓ ۚ أَوَلَمْ يَكْفُرُوا۟ بِمَآ أُوتِىَ مُوسَىٰ مِن قَبْلُ ۖ قَالُوا۟ سِحْرَانِ تَظَـٰهَرَا وَقَالُوٓا۟ إِنَّا بِكُلٍّ كَـٰفِرُونَ
ನಮ್ಮ ಕಡೆಯ ಸತ್ಯವು ಅವರಿಗೆ ತಲುಪಿದಾಗ ಅವರು ಹೇಳಿದರು: “ಮೂಸಾರಿಗೆ ನೀಡಲಾದಂತಹ ದೃಷ್ಟಾಂತಗಳನ್ನು ಇವರಿಗೇಕೆ ನೀಡಲಾಗಿಲ್ಲ?” ಆದರೆ ಇದಕ್ಕೆ ಮೊದಲು ಮೂಸಾರಿಗೆ ನೀಡಲಾದ ದೃಷ್ಟಾಂತಗಳನ್ನು ಅವರು ನಿಷೇಧಿಸಿಲ್ಲವೇ? ಅವರು ಹೇಳಿದರು: “ಇವೆರಡು (ಕುರ್‌ಆನ್ ಮತ್ತು ತೌರಾತ್) ಮಾಟಗಾರಿಕೆಗಳಾಗಿದ್ದು ಪರಸ್ಪರ ಬೆಂಬಲಿಸುತ್ತವೆ.” ಅವರು ಹೇಳಿದರು: “ನಾವು ಇವೆಲ್ಲವನ್ನೂ ನಿಷೇಧಿಸುತ್ತೇವೆ.”
28 : 49
قُلْ فَأْتُوا۟ بِكِتَـٰبٍ مِّنْ عِندِ ٱللَّهِ هُوَ أَهْدَىٰ مِنْهُمَآ أَتَّبِعْهُ إِن كُنتُمْ صَـٰدِقِينَ
ಹೇಳಿರಿ: “ನೀವು ಅವೆರಡಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಸನ್ಮಾರ್ಗವನ್ನು ತೋರಿಸುವ ಒಂದು ಗ್ರಂಥವನ್ನು ಅಲ್ಲಾಹನ ಬಳಿಯಿಂದ ತನ್ನಿರಿ. ಅದನ್ನು ನಾನು ಅನುಸರಿಸುತ್ತೇನೆ. ನೀವು ಸತ್ಯವಂತರಾಗಿದ್ದರೆ.”
28 : 50
فَإِن لَّمْ يَسْتَجِيبُوا۟ لَكَ فَٱعْلَمْ أَنَّمَا يَتَّبِعُونَ أَهْوَآءَهُمْ ۚ وَمَنْ أَضَلُّ مِمَّنِ ٱتَّبَعَ هَوَىٰهُ بِغَيْرِ هُدًى مِّنَ ٱللَّهِ ۚ إِنَّ ٱللَّهَ لَا يَهْدِى ٱلْقَوْمَ ٱلظَّـٰلِمِينَ
ಅವರೇನಾದರೂ ನಿಮಗೆ ಉತ್ತರ ನೀಡದಿದ್ದರೆ ತಿಳಿಯಿರಿ! ಅವರು ಅವರ ಸ್ವೇಚ್ಛೆಗಳನ್ನು ಮಾತ್ರ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯ ಯಾವುದೇ ಮಾರ್ಗದರ್ಶನವನ್ನು ಪಡೆಯದೆ ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವವನಿಗಿಂತ ಹೆಚ್ಚು ದಾರಿತಪ್ಪಿದವನು ಯಾರು? ನಿಶ್ಚಯವಾಗಿಯೂ ಅಲ್ಲಾಹು ಅಕ್ರಮಿಗಳಾದ ಜನರಿಗೆ ಸನ್ಮಾರ್ಗ ತೋರಿಸುವುದಿಲ್ಲ.
28 : 51
۞ وَلَقَدْ وَصَّلْنَا لَهُمُ ٱلْقَوْلَ لَعَلَّهُمْ يَتَذَكَّرُونَ
ನಾವು ಜನರಿಗೆ ನಿರಂತರವಾಗಿ ನಮ್ಮ ವಚನಗಳನ್ನು ತಲುಪಿಸುತ್ತಿದ್ದೇವೆ. ಅವರು ಉಪದೇಶ ಸ್ವೀಕರಿಸಲೆಂದು.
28 : 52
ٱلَّذِينَ ءَاتَيْنَـٰهُمُ ٱلْكِتَـٰبَ مِن قَبْلِهِۦ هُم بِهِۦ يُؤْمِنُونَ
ಇದಕ್ಕೆ ಮೊದಲು ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು ಇದರಲ್ಲೂ ವಿಶ್ವಾಸವಿಡುತ್ತಾರೆ.
28 : 53
وَإِذَا يُتْلَىٰ عَلَيْهِمْ قَالُوٓا۟ ءَامَنَّا بِهِۦٓ إِنَّهُ ٱلْحَقُّ مِن رَّبِّنَآ إِنَّا كُنَّا مِن قَبْلِهِۦ مُسْلِمِينَ
ಅವರಿಗೆ ಇದನ್ನು ಓದಿಕೊಡಲಾದಾಗ ಅವರು ಹೇಳುತ್ತಾರೆ: “ನಾವು ಇದರಲ್ಲಿ ವಿಶ್ವಾಸವಿಟ್ಟಿದ್ದೇವೆ. ನಿಶ್ಚಯವಾಗಿಯೂ ಇದು ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ನಿಶ್ಚಯವಾಗಿಯೂ ನಾವು ಇದಕ್ಕಿಂತ ಮೊದಲೇ ಮುಸಲ್ಮಾನರಾಗಿದ್ದೆವು.”
28 : 54
أُو۟لَـٰٓئِكَ يُؤْتَوْنَ أَجْرَهُم مَّرَّتَيْنِ بِمَا صَبَرُوا۟ وَيَدْرَءُونَ بِٱلْحَسَنَةِ ٱلسَّيِّئَةَ وَمِمَّا رَزَقْنَـٰهُمْ يُنفِقُونَ
ಅವರು ತಾಳ್ಮೆಯಿಂದ ಜೀವಿಸಿದ ಕಾರಣ ಅವರಿಗೆ ಇಮ್ಮಡಿ ಪ್ರತಿಫಲವನ್ನು ನೀಡಲಾಗುವುದು. ಅವರು ಒಳಿತಿನ ಮೂಲಕ ಕೆಡುಕನ್ನು ದೂರೀಕರಿಸುತ್ತಾರೆ ಮತ್ತು ನಾವು ಅವರಿಗೆ ನೀಡಿದ ಧನದಿಂದ ಖರ್ಚು ಮಾಡುತ್ತಾರೆ.
28 : 55
وَإِذَا سَمِعُوا۟ ٱللَّغْوَ أَعْرَضُوا۟ عَنْهُ وَقَالُوا۟ لَنَآ أَعْمَـٰلُنَا وَلَكُمْ أَعْمَـٰلُكُمْ سَلَـٰمٌ عَلَيْكُمْ لَا نَبْتَغِى ٱلْجَـٰهِلِينَ
ಅವರು ಅನಗತ್ಯ ಮಾತುಗಳನ್ನು ಕೇಳಿದರೆ (ಅದಕ್ಕೆ ಕಿವಿಗೊಡದೆ) ವಿಮುಖರಾಗುತ್ತಾರೆ. ಅವರು ಹೇಳುತ್ತಾರೆ: “ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಿಮಗೆ ಸಲಾಂ. ನಮಗೆ ಅವಿವೇಕಿಗಳ ಅಗತ್ಯವಿಲ್ಲ.”
28 : 56
إِنَّكَ لَا تَهْدِى مَنْ أَحْبَبْتَ وَلَـٰكِنَّ ٱللَّهَ يَهْدِى مَن يَشَآءُ ۚ وَهُوَ أَعْلَمُ بِٱلْمُهْتَدِينَ
ನಿಮಗೆ ಇಷ್ಟವಿರುವವರನ್ನು ಸನ್ಮಾರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯವಿಲ್ಲ.[1] ಆದರೆ ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಸನ್ಮಾರ್ಗದಲ್ಲಿರುವವರ ಬಗ್ಗೆ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ.
28 : 57
وَقَالُوٓا۟ إِن نَّتَّبِعِ ٱلْهُدَىٰ مَعَكَ نُتَخَطَّفْ مِنْ أَرْضِنَآ ۚ أَوَلَمْ نُمَكِّن لَّهُمْ حَرَمًا ءَامِنًا يُجْبَىٰٓ إِلَيْهِ ثَمَرَٰتُ كُلِّ شَىْءٍ رِّزْقًا مِّن لَّدُنَّا وَلَـٰكِنَّ أَكْثَرَهُمْ لَا يَعْلَمُونَ
ಅವರು ಹೇಳುತ್ತಾರೆ: “ನಾವೇನಾದರೂ ನಿಮ್ಮ ಜೊತೆಗೆ ಸೇರಿ ಸನ್ಮಾರ್ಗವನ್ನು ಹಿಂಬಾಲಿಸಿದರೆ ನಮ್ಮನ್ನು ನೆಲದಿಂದ ಕಿತ್ತೆಸೆಯಲಾಗಬಹುದು.” ನಾವು ಅವರಿಗೆ ನಿರ್ಭಯವಾದ ಒಂದು ಪವಿತ್ರ ಸ್ಥಳದಲ್ಲಿ (ಹರಂನಲ್ಲಿ) ಬದುಕುವ ಅವಕಾಶ ಮಾಡಿಕೊಡಲಿಲ್ಲವೇ? ಅಲ್ಲಿಗೆ ಎಲ್ಲಾ ವಸ್ತುಗಳ ಫಲಗಳನ್ನು ನಮ್ಮ ಕಡೆಯ ಉಪಜೀವನವಾಗಿ ತರಲಾಗುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ.
28 : 58
وَكَمْ أَهْلَكْنَا مِن قَرْيَةٍۭ بَطِرَتْ مَعِيشَتَهَا ۖ فَتِلْكَ مَسَـٰكِنُهُمْ لَمْ تُسْكَن مِّنۢ بَعْدِهِمْ إِلَّا قَلِيلًا ۖ وَكُنَّا نَحْنُ ٱلْوَٰرِثِينَ
ಆಡಂಬರದ ಜೀವನ ನಡೆಸುತ್ತಿದ್ದ ಎಷ್ಟೋ ಊರುಗಳನ್ನು ನಾವು ನಾಶಮಾಡಿದ್ದೇವೆ. ಅಗೋ ಅವರ ವಾಸಸ್ಥಳಗಳು! ಅವರ ಬಳಿಕ ಬಹಳ ಅಪೂರ್ವವಾಗಿಯೇ ಅಲ್ಲಿ ಜನವಾಸವುಂಟಾಗಿತ್ತು. ನಾವೇ ಅವುಗಳ ವಾರಸುದಾರರಾಗಿದ್ದೇವೆ.
28 : 59
وَمَا كَانَ رَبُّكَ مُهْلِكَ ٱلْقُرَىٰ حَتَّىٰ يَبْعَثَ فِىٓ أُمِّهَا رَسُولًا يَتْلُوا۟ عَلَيْهِمْ ءَايَـٰتِنَا ۚ وَمَا كُنَّا مُهْلِكِى ٱلْقُرَىٰٓ إِلَّا وَأَهْلُهَا ظَـٰلِمُونَ
ನಿಮ್ಮ ಪರಿಪಾಲಕನು (ಅಲ್ಲಾಹು) ಊರುಗಳನ್ನು ನಾಶ ಮಾಡುವುದಿಲ್ಲ. ಎಲ್ಲಿಯವರೆಗೆಂದರೆ, ನಮ್ಮ ವಚನಗಳನ್ನು ಜನರಿಗೆ ಓದಿಕೊಡುವ ಒಬ್ಬ ಸಂದೇಶವಾಹಕರನ್ನು ಅವುಗಳಲ್ಲಿ ಪ್ರಮುಖವಾದ ಊರಿಗೆ ಕಳುಹಿಸುವ ತನಕ. ಊರುಗಳ ನಿವಾಸಿಗಳು ಅಕ್ರಮಗಳಲ್ಲಿ ಮುಳುಗಿರುವಾಗ ಮಾತ್ರ ನಾವು ಆ ಊರುಗಳನ್ನು ನಾಶ ಮಾಡುತ್ತೇವೆ.
28 : 60
وَمَآ أُوتِيتُم مِّن شَىْءٍ فَمَتَـٰعُ ٱلْحَيَوٰةِ ٱلدُّنْيَا وَزِينَتُهَا ۚ وَمَا عِندَ ٱللَّهِ خَيْرٌ وَأَبْقَىٰٓ ۚ أَفَلَا تَعْقِلُونَ
ನಿಮಗೆ ಏನಾದರೂ ನೀಡಲಾಗಿದ್ದರೆ ಅದು ಇಹಲೋಕ ಜೀವನದ ಆನಂದ ಮತ್ತು ಅಲಂಕಾರ ಮಾತ್ರವಾಗಿದೆ. ಅಲ್ಲಾಹನ ಬಳಿ ಏನಿದೆಯೋ ಅದು ಅತ್ಯುತ್ತಮ ಮತ್ತು ಶಾಶ್ವತವಾಗಿದೆ. ನೀವು ಆಲೋಚಿಸುವುದಿಲ್ಲವೇ?
28 : 61
أَفَمَن وَعَدْنَـٰهُ وَعْدًا حَسَنًا فَهُوَ لَـٰقِيهِ كَمَن مَّتَّعْنَـٰهُ مَتَـٰعَ ٱلْحَيَوٰةِ ٱلدُّنْيَا ثُمَّ هُوَ يَوْمَ ٱلْقِيَـٰمَةِ مِنَ ٱلْمُحْضَرِينَ
ನಾವು ಒಬ್ಬನಿಗೆ ಒಳ್ಳೆಯ ವಾಗ್ದಾನವನ್ನು ನೀಡಿ ನಂತರ ಅವನು ಅದನ್ನು ಸತ್ಯವಾಗಿ ಕಾಣುತ್ತಾನೆ. ಇನ್ನೊಬ್ಬನಿಗೆ ನಾವು ಇಹಲೋಕ ಜೀವನದ ಆನಂದವನ್ನು ನೀಡಿ ನಂತರ ಅವನನ್ನು ಪುನರುತ್ಥಾನದ ದಿನದಂದು ಶಿಕ್ಷೆಗೆ ಹಾಜರುಗೊಳಿಸಲಾಗುತ್ತದೆ. ಇವರಿಬ್ಬರು ಸಮಾನರೇ?
28 : 62
وَيَوْمَ يُنَادِيهِمْ فَيَقُولُ أَيْنَ شُرَكَآءِىَ ٱلَّذِينَ كُنتُمْ تَزْعُمُونَ
ಅಲ್ಲಾಹು ಅವರನ್ನು ಕರೆಯುವ ದಿನ. ಅವನು ಕೇಳುವನು: “ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ಆ ನಿಮ್ಮ ದೇವರುಗಳು ಎಲ್ಲಿದ್ದಾರೆ?”
28 : 63
قَالَ ٱلَّذِينَ حَقَّ عَلَيْهِمُ ٱلْقَوْلُ رَبَّنَا هَـٰٓؤُلَآءِ ٱلَّذِينَ أَغْوَيْنَآ أَغْوَيْنَـٰهُمْ كَمَا غَوَيْنَا ۖ تَبَرَّأْنَآ إِلَيْكَ ۖ مَا كَانُوٓا۟ إِيَّانَا يَعْبُدُونَ
ಯಾರ ಮೇಲೆ ಶಿಕ್ಷೆಯ ವಚನವು ಖಾತ್ರಿಯಾಗಿದೆಯೋ ಅವರು (ಸತ್ಯನಿಷೇಧಿಗಳ ಮುಖಂಡರು) ಹೇಳುವರು: “ನಮ್ಮ ಪರಿಪಾಲಕನೇ! ನಾವು ದಾರಿತಪ್ಪಿಸಿದ್ದು ಇವರನ್ನೇ. ನಾವು ದಾರಿ ತಪ್ಪಿದಂತೆಯೇ ಇವರನ್ನೂ ದಾರಿತಪ್ಪಿಸಿದೆವು. ನಾವು ಇವರಿಂದ ಸಂಪೂರ್ಣ ಮುಕ್ತರಾಗಿದ್ದೇವೆ. ಅವರು ನಮ್ಮನ್ನು ಆರಾಧಿಸುತ್ತಲೇ ಇರಲಿಲ್ಲ.”
28 : 64
وَقِيلَ ٱدْعُوا۟ شُرَكَآءَكُمْ فَدَعَوْهُمْ فَلَمْ يَسْتَجِيبُوا۟ لَهُمْ وَرَأَوُا۟ ٱلْعَذَابَ ۚ لَوْ أَنَّهُمْ كَانُوا۟ يَهْتَدُونَ
ಅವರೊಡನೆ ಹೇಳಲಾಗುವುದು: “ನೀವು ಅಲ್ಲಾಹನೊಡನೆ ಸಹಭಾಗಿಗಳನ್ನಾಗಿ ಮಾಡಿದ (ನಿಮ್ಮ ದೇವರುಗಳನ್ನು) ಕರೆದು ಪ್ರಾರ್ಥಿಸಿರಿ.” ಆಗ ಅವರು ಅವರನ್ನು ಕರೆದು ಪ್ರಾರ್ಥಿಸುವರು. ಆದರೆ ಅವರು (ದೇವರುಗಳು) ಅವರಿಗೆ ಉತ್ತರ ನೀಡುವುದಿಲ್ಲ. ಅವರೆಲ್ಲರೂ ಶಿಕ್ಷೆಯನ್ನು ನೋಡುವರು. ಅವರೇನಾದರೂ ಸನ್ಮಾರ್ಗವನ್ನು ಸ್ವೀಕರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
28 : 65
وَيَوْمَ يُنَادِيهِمْ فَيَقُولُ مَاذَآ أَجَبْتُمُ ٱلْمُرْسَلِينَ
ಅಲ್ಲಾಹು ಅವರನ್ನು ಕರೆಯುವ ದಿನ. ಅವನು ಕೇಳುವನು: “ನೀವು ಸಂದೇಶವಾಹಕರಿಗೆ ಏನು ಉತ್ತರ ನೀಡಿದಿರಿ?”
28 : 66
فَعَمِيَتْ عَلَيْهِمُ ٱلْأَنۢبَآءُ يَوْمَئِذٍ فَهُمْ لَا يَتَسَآءَلُونَ
ಅಂದು ಅವರಿಗೆ (ಅವರು ಹೇಳುತ್ತಿದ್ದ) ಎಲ್ಲಾ ಸಾಕ್ಷ್ಯಗಳು ಅಸ್ಪಷ್ಟವಾಗಿ ಬಿಡುವುವು. ಅವರು ಪರಸ್ಪರ ಪ್ರಶ್ನಿಸುವುದನ್ನೂ ಮಾಡಲಾರರು.
28 : 67
فَأَمَّا مَن تَابَ وَءَامَنَ وَعَمِلَ صَـٰلِحًا فَعَسَىٰٓ أَن يَكُونَ مِنَ ٱلْمُفْلِحِينَ
ಆದರೆ ಯಾರು ಪಶ್ಚಾತ್ತಾಪಪಟ್ಟು, ಸತ್ಯವಿಶ್ವಾಸಿಯಾಗಿ, ಸತ್ಕರ್ಮವೆಸಗುತ್ತಾನೋ ಅವನು ಖಂಡಿತ ಯಶಸ್ವಿಯಾದವರಲ್ಲಿ ಸೇರುವನು.
28 : 68
وَرَبُّكَ يَخْلُقُ مَا يَشَآءُ وَيَخْتَارُ ۗ مَا كَانَ لَهُمُ ٱلْخِيَرَةُ ۚ سُبْحَـٰنَ ٱللَّهِ وَتَعَـٰلَىٰ عَمَّا يُشْرِكُونَ
ನಿಮ್ಮ ಪರಿಪಾಲಕನು (ಅಲ್ಲಾಹು) ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ ಮತ್ತು ಅವನು ಇಚ್ಛಿಸುವುದನ್ನು ಆರಿಸುತ್ತಾನೆ. ಆದರೆ ಅವರಲ್ಲಿ ಯಾರಿಗೂ ಆಯ್ಕೆ ಮಾಡುವ ಅಧಿಕಾರವಿಲ್ಲ. ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.
28 : 69
وَرَبُّكَ يَعْلَمُ مَا تُكِنُّ صُدُورُهُمْ وَمَا يُعْلِنُونَ
ಅವರ ಹೃದಯಗಳು ಅಡಗಿಸಿಡುವುದನ್ನು ಮತ್ತು ಅವರು ಬಹಿರಂಗಪಡಿಸುವುದನ್ನು ನಿಮ್ಮ ಪರಿಪಾಲಕನು (ಅಲ್ಲಾಹು) ತಿಳಿಯುತ್ತಾನೆ.
28 : 70
وَهُوَ ٱللَّهُ لَآ إِلَـٰهَ إِلَّا هُوَ ۖ لَهُ ٱلْحَمْدُ فِى ٱلْأُولَىٰ وَٱلْـَٔاخِرَةِ ۖ وَلَهُ ٱلْحُكْمُ وَإِلَيْهِ تُرْجَعُونَ
ಅವನೇ ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಇಹಲೋಕದಲ್ಲೂ ಪರಲೋಕದಲ್ಲೂ ಅವನಿಗೇ ಸರ್ವಸ್ತುತಿ. ಆಜ್ಞಾಧಿಕಾರವು ಅವನಿಗೆ ಸೇರಿದ್ದು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
28 : 71
قُلْ أَرَءَيْتُمْ إِن جَعَلَ ٱللَّهُ عَلَيْكُمُ ٱلَّيْلَ سَرْمَدًا إِلَىٰ يَوْمِ ٱلْقِيَـٰمَةِ مَنْ إِلَـٰهٌ غَيْرُ ٱللَّهِ يَأْتِيكُم بِضِيَآءٍ ۖ أَفَلَا تَسْمَعُونَ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಅಲ್ಲಾಹು ನಿಮಗೆ ಪುನರುತ್ಥಾನದ ದಿನದವರೆಗೆ ಕೇವಲ ರಾತ್ರಿಯನ್ನು ಮಾತ್ರ ಮುಂದುವರಿಸಿದರೆ ಅಲ್ಲಾಹನ ಹೊರತಾಗಿ ನಿಮಗೆ ಹಗಲಿನ ಬೆಳಕನ್ನು ತಂದುಕೊಡುವ ಬೇರೆ ದೇವರು ಯಾರಾದರೂ ಇದ್ದಾರೆಯೇ? ಏನು ನೀವು ಕಿವಿಗೊಡುವುದಿಲ್ಲವೇ?”
28 : 72
قُلْ أَرَءَيْتُمْ إِن جَعَلَ ٱللَّهُ عَلَيْكُمُ ٱلنَّهَارَ سَرْمَدًا إِلَىٰ يَوْمِ ٱلْقِيَـٰمَةِ مَنْ إِلَـٰهٌ غَيْرُ ٱللَّهِ يَأْتِيكُم بِلَيْلٍ تَسْكُنُونَ فِيهِ ۖ أَفَلَا تُبْصِرُونَ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮಗೆ ಪುನರುತ್ಥಾನದ ದಿನದವರೆಗೆ ಕೇವಲ ಹಗಲನ್ನು ಮಾತ್ರ ಮುಂದುವರಿಸಿದರೆ ನಿಮಗೆ ವಿಶ್ರಾಂತಿ ಪಡೆಯುಲು ರಾತ್ರಿಯನ್ನು ತಂದುಕೊಡುವ ದೇವರು ಅಲ್ಲಾಹನ ಹೊರತಾಗಿ ಬೇರೆ ಯಾರಾದರೂ ಇದ್ದಾರೆಯೇ? ಏನು ನೀವು ಕಣ್ತೆರೆದು ನೋಡುವುದಿಲ್ಲವೇ?”
28 : 73
وَمِن رَّحْمَتِهِۦ جَعَلَ لَكُمُ ٱلَّيْلَ وَٱلنَّهَارَ لِتَسْكُنُوا۟ فِيهِ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ
ರಾತ್ರಿಯಲ್ಲಿ ನೀವು ವಿಶ್ರಾಂತಿ ಪಡೆಯಲು ಮತ್ತು ಹಗಲಲ್ಲಿ ಅವನ ಔದಾರ್ಯದಿಂದ ನಿಮ್ಮ ಉಪಜೀವನವನ್ನು ಹುಡುಕಲು ಹಾಗೂ ನೀವು ಕೃತಜ್ಞರಾಗಿ ಜೀವಿಸಲು ಅವನು ತನ್ನ ದಯೆಯಿಂದ ನಿಮಗೆ ರಾತ್ರಿ ಮತ್ತು ಹಗಲನ್ನು ಮಾಡಿಕೊಟ್ಟಿದ್ದಾನೆ.
28 : 74
وَيَوْمَ يُنَادِيهِمْ فَيَقُولُ أَيْنَ شُرَكَآءِىَ ٱلَّذِينَ كُنتُمْ تَزْعُمُونَ
ಅಲ್ಲಾಹು ಅವರನ್ನು ಕರೆಯುವ ದಿನ. ಅವನು ಕೇಳುವನು: “ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ದೇವರುಗಳು ಎಲ್ಲಿದ್ದಾರೆ?”
28 : 75
وَنَزَعْنَا مِن كُلِّ أُمَّةٍ شَهِيدًا فَقُلْنَا هَاتُوا۟ بُرْهَـٰنَكُمْ فَعَلِمُوٓا۟ أَنَّ ٱلْحَقَّ لِلَّهِ وَضَلَّ عَنْهُم مَّا كَانُوا۟ يَفْتَرُونَ
ನಾವು ಎಲ್ಲಾ ಸಮುದಾಯಗಳಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ಬೇರ್ಪಡಿಸುವೆವು. ನಂತರ ನಾವು ಹೇಳುವೆವು: “ನಿಮ್ಮ ಸಾಕ್ಷ್ಯವನ್ನು ತನ್ನಿರಿ.” ಆಗ ಸತ್ಯವಿರುವುದು ಅಲ್ಲಾಹನಲ್ಲಿ ಎಂದು ಅವರಿಗೆ ಮನದಟ್ಟಾಗುವುದು. ಅವರು ಸುಳ್ಳು ಆರೋಪಗಳೆಲ್ಲವೂ ಅವರನ್ನು ಬಿಟ್ಟು ಹೋಗುವುವು.
28 : 76
۞ إِنَّ قَـٰرُونَ كَانَ مِن قَوْمِ مُوسَىٰ فَبَغَىٰ عَلَيْهِمْ ۖ وَءَاتَيْنَـٰهُ مِنَ ٱلْكُنُوزِ مَآ إِنَّ مَفَاتِحَهُۥ لَتَنُوٓأُ بِٱلْعُصْبَةِ أُو۟لِى ٱلْقُوَّةِ إِذْ قَالَ لَهُۥ قَوْمُهُۥ لَا تَفْرَحْ ۖ إِنَّ ٱللَّهَ لَا يُحِبُّ ٱلْفَرِحِينَ
ನಿಶ್ಚಯವಾಗಿಯೂ ಕಾರೂನ್ ಮೂಸಾರ ಜನರಲ್ಲಿ ಸೇರಿದವನಾಗಿದ್ದನು.[1] ಅವನು ಅವರ ಮೇಲೆ ಅತಿರೇಕವೆಸಗುತ್ತಿದ್ದನು. ನಾವು ಅವನಿಗೆ ಎಷ್ಟು ದೊಡ್ಡ ದೊಡ್ಡ ಖಜಾನೆಗಳನ್ನು ನೀಡಿದ್ದೇವೆಂದರೆ, ಬಲಿಷ್ಠರಾದ ಹಲವಾರು ಜನರು ಕೂಡ ಬಹಳ ಕಷ್ಟದಿಂದಲೇ ಅವುಗಳ ಕೀಲಿಕೈಗಳನ್ನು ಹೊತ್ತು ಸಾಗುತ್ತಿದ್ದರು. ಅವನ ಜನರು ಅವನೊಡನೆ ಹೇಳಿದ ಸಂದರ್ಭ: “ಅಟ್ಟಹಾಸ ಮೆರೆಯಬೇಡ. ಖಂಡಿತನಾಗಿಯೂ ಅಟ್ಟಹಾಸ ಮೆರೆಯುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
28 : 77
وَٱبْتَغِ فِيمَآ ءَاتَىٰكَ ٱللَّهُ ٱلدَّارَ ٱلْـَٔاخِرَةَ ۖ وَلَا تَنسَ نَصِيبَكَ مِنَ ٱلدُّنْيَا ۖ وَأَحْسِن كَمَآ أَحْسَنَ ٱللَّهُ إِلَيْكَ ۖ وَلَا تَبْغِ ٱلْفَسَادَ فِى ٱلْأَرْضِ ۖ إِنَّ ٱللَّهَ لَا يُحِبُّ ٱلْمُفْسِدِينَ
ಅಲ್ಲಾಹು ನಿನಗೆ ನೀಡಿದ ಆಸ್ತಿಯಿಂದ ಪರಲೋಕದ ಯಶಸ್ಸನ್ನು ಅರಸು. ನಿನ್ನ ಇಹಲೋಕದ ಪಾಲನ್ನೂ ಮರೆಯಬೇಡ. ಅಲ್ಲಾಹು ನಿನಗೆ ಒಳಿತು ಮಾಡಿದಂತೆ ನೀನು ಜನರಿಗೂ ಒಳಿತು ಮಾಡು. ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮುಂದಾಗಬೇಡ. ನಿಶ್ಚಯವಾಗಿಯೂ ಕಿಡಿಗೇಡಿತನ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.”
28 : 78
قَالَ إِنَّمَآ أُوتِيتُهُۥ عَلَىٰ عِلْمٍ عِندِىٓ ۚ أَوَلَمْ يَعْلَمْ أَنَّ ٱللَّهَ قَدْ أَهْلَكَ مِن قَبْلِهِۦ مِنَ ٱلْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْـَٔلُ عَن ذُنُوبِهِمُ ٱلْمُجْرِمُونَ
ಅವನು ಹೇಳಿದನು: “ನನ್ನ ಜ್ಞಾನದ ಆಧಾರದಲ್ಲೇ ಇವೆಲ್ಲವನ್ನೂ ನನಗೆ ನೀಡಲಾಗಿದೆ.” ಅವನಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದ ಮತ್ತು ಅವನಿಗಿಂತ ಹೆಚ್ಚು ಜನಬಲವಿದ್ದ ಎಷ್ಟೋ ತಲೆಮಾರುಗಳನ್ನು ಅಲ್ಲಾಹು ಅವನಿಗಿಂತ ಮೊದಲು ನಾಶ ಮಾಡಿದ್ದಾನೆಂದು ಅವನು ತಿಳಿದಿಲ್ಲವೇ? ಅಪರಾಧಿಗಳೊಡನೆ ಅವರ ಅಪರಾಧಗಳ ಕುರಿತು ಪ್ರಶ್ನಿಸಲಾಗುವುದಿಲ್ಲ.
28 : 79
فَخَرَجَ عَلَىٰ قَوْمِهِۦ فِى زِينَتِهِۦ ۖ قَالَ ٱلَّذِينَ يُرِيدُونَ ٱلْحَيَوٰةَ ٱلدُّنْيَا يَـٰلَيْتَ لَنَا مِثْلَ مَآ أُوتِىَ قَـٰرُونُ إِنَّهُۥ لَذُو حَظٍّ عَظِيمٍ
ನಂತರ ಅವನು (ಕಾರೂನ್) ತನ್ನ ಎಲ್ಲಾ ಅಲಂಕಾರಗಳೊಂದಿಗೆ ಜನರ ನಡುವಿಗೆ ಬಂದನು. ಇಹಲೋಕ ಜೀವನವನ್ನು ಬಯಸುವವರು ಹೇಳಿದರು: “ಕಾರೂನನಿಗೆ ನೀಡಲಾಗಿರುವ ಸಂಪತ್ತು ನಮಗೂ ನೀಡಲಾಗಿದ್ದರೆ ಎಷ್ಟು ಚೆನ್ನಾಗಿತ್ತು! ನಿಜಕ್ಕೂ ಅವನು ಮಹಾ ಅದೃಷ್ಟವಂತನೇ ಸರಿ.”
28 : 80
وَقَالَ ٱلَّذِينَ أُوتُوا۟ ٱلْعِلْمَ وَيْلَكُمْ ثَوَابُ ٱللَّهِ خَيْرٌ لِّمَنْ ءَامَنَ وَعَمِلَ صَـٰلِحًا وَلَا يُلَقَّىٰهَآ إِلَّا ٱلصَّـٰبِرُونَ
ಆದರೆ ಜ್ಞಾನ ನೀಡಲಾದವರು ಹೇಳಿದರು: “ನಿಮಗೆ ದುರದೃಷ್ಟ ಕಾದಿದೆ! ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾಹನ ಪ್ರತಿಫಲವೇ ಅತ್ಯುತ್ತಮವಾಗಿದೆ. ತಾಳ್ಮೆ ಮತ್ತು ಸ್ಥೈರ್ಯದಿಂದ ಬದುಕುವವರಿಗೆ ಮಾತ್ರ ಇದನ್ನು ನೀಡಲಾಗುತ್ತದೆ.”
28 : 81
فَخَسَفْنَا بِهِۦ وَبِدَارِهِ ٱلْأَرْضَ فَمَا كَانَ لَهُۥ مِن فِئَةٍ يَنصُرُونَهُۥ مِن دُونِ ٱللَّهِ وَمَا كَانَ مِنَ ٱلْمُنتَصِرِينَ
ನಂತರ ನಾವು ಅವನನ್ನು ಮತ್ತು ಅವನ ಅರಮನೆಯನ್ನು ಭೂಮಿಯಲ್ಲಿ ಹುದುಗಿಸಿದೆವು. ಆಗ ಅಲ್ಲಾಹನ ಹೊರತು ಅವನಿಗೆ ಸಹಾಯ ಮಾಡುವ ಯಾವುದೇ ಜನರೂ ಇರಲಿಲ್ಲ. ಸ್ವಯಂ ರಕ್ಷಣೆ ಪಡೆಯಲೂ ಅವನಿಗೆ ಸಾಧ್ಯವಾಗಲಿಲ್ಲ.
28 : 82
وَأَصْبَحَ ٱلَّذِينَ تَمَنَّوْا۟ مَكَانَهُۥ بِٱلْأَمْسِ يَقُولُونَ وَيْكَأَنَّ ٱللَّهَ يَبْسُطُ ٱلرِّزْقَ لِمَن يَشَآءُ مِنْ عِبَادِهِۦ وَيَقْدِرُ ۖ لَوْلَآ أَن مَّنَّ ٱللَّهُ عَلَيْنَا لَخَسَفَ بِنَا ۖ وَيْكَأَنَّهُۥ لَا يُفْلِحُ ٱلْكَـٰفِرُونَ
ನಿನ್ನೆ ಅವನ ಸ್ಥಾನಮಾನಕ್ಕೆ ತಲುಪಲು ಆಸೆಪಟ್ಟವರು ಇಂದು ಹೀಗೆ ಹೇಳತೊಡಗಿದರು: “ನಿಮಗೆ ಕಾಣುವುದಿಲ್ಲವೇ! ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆ. ಒಂದು ವೇಳೆ ಅಲ್ಲಾಹು ನಮ್ಮ ಮೇಲೆ ಔದಾರ್ಯ ತೋರದಿರುತ್ತಿದ್ದರೆ ನಮ್ಮನ್ನೂ ಭೂಮಿಯಲ್ಲಿ ಹುದುಗಿಸುತ್ತಿದ್ದನು! ನಿಮಗೆ ಕಾಣುವುದಿಲ್ಲವೇ! ಸತ್ಯನಿಷೇಧಿಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.”
28 : 83
تِلْكَ ٱلدَّارُ ٱلْـَٔاخِرَةُ نَجْعَلُهَا لِلَّذِينَ لَا يُرِيدُونَ عُلُوًّا فِى ٱلْأَرْضِ وَلَا فَسَادًا ۚ وَٱلْعَـٰقِبَةُ لِلْمُتَّقِينَ
ನಾವು ಆ ಪರಲೋಕ ಭವನವನ್ನು ಭೂಮಿಯಲ್ಲಿ ಅಹಂಕಾರ ತೋರದ ಮತ್ತು ಕಿಡಿಗೇಡಿತನ ಮಾಡದ ಜನರಿಗೆ ಕೊಟ್ಟುಬಿಡುವೆವು. ಅಂತಿಮ ಫಲಿತಾಂಶವಿರುವುದು ದೇವಭಯವುಳ್ಳರಿಗೆ ಮಾತ್ರ.
28 : 84
مَن جَآءَ بِٱلْحَسَنَةِ فَلَهُۥ خَيْرٌ مِّنْهَا ۖ وَمَن جَآءَ بِٱلسَّيِّئَةِ فَلَا يُجْزَى ٱلَّذِينَ عَمِلُوا۟ ٱلسَّيِّـَٔاتِ إِلَّا مَا كَانُوا۟ يَعْمَلُونَ
ಯಾರು ಒಳಿತನ್ನು ತರುತ್ತಾನೋ ಅವನಿಗೆ ಅದಕ್ಕಿಂತಲೂ ಶ್ರೇಷ್ಠವಾದುದು ದೊರೆಯುತ್ತದೆ. ಯಾರಾದರೂ ಕೆಡುಕನ್ನು ತಂದರೆ—ಕೆಡುಕು ಮಾಡುವವರಿಗೆ ಅವರು ಮಾಡಿದ ಕೆಡುಕಿನ ಪ್ರತಿಫಲವಲ್ಲದೆ ಬೇರೇನೂ ನೀಡಲಾಗುವುದಿಲ್ಲ.
28 : 85
إِنَّ ٱلَّذِى فَرَضَ عَلَيْكَ ٱلْقُرْءَانَ لَرَآدُّكَ إِلَىٰ مَعَادٍ ۚ قُل رَّبِّىٓ أَعْلَمُ مَن جَآءَ بِٱلْهُدَىٰ وَمَنْ هُوَ فِى ضَلَـٰلٍ مُّبِينٍ
ನಿಶ್ಚಯವಾಗಿಯೂ ನಿಮಗೆ ಈ ಕುರ್‌ಆನನ್ನು ಅವತೀರ್ಣಗೊಳಿಸಿದವನು ಯಾರೋ ಅವನು ನಿಮ್ಮನ್ನು ಮೊದಲಿನ ಸ್ಥಳಕ್ಕೇ (ಮಕ್ಕಾ) ಹಿಂದಿರುಗಿಸುವನು. ಹೇಳಿರಿ: “ಸನ್ಮಾರ್ಗವನ್ನು ತಂದವರು ಯಾರು ಮತ್ತು ಸ್ಪಷ್ಟ ದುರ್ಮಾರ್ಗದಲ್ಲಿರುವವರು ಯಾರು ಎಂದು ನನ್ನ ಪರಿಪಾಲಕ (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.”
28 : 86
وَمَا كُنتَ تَرْجُوٓا۟ أَن يُلْقَىٰٓ إِلَيْكَ ٱلْكِتَـٰبُ إِلَّا رَحْمَةً مِّن رَّبِّكَ ۖ فَلَا تَكُونَنَّ ظَهِيرًا لِّلْكَـٰفِرِينَ
ನಿಮಗೆ ಗ್ರಂಥವು ಅವತೀರ್ಣವಾಗಬಹುದೆಂದು ನೀವು ಎಂದಿಗೂ ಭಾವಿಸಿರಲಿಲ್ಲ. ಆದರೆ ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯಾಗಿದೆ. ಆದ್ದರಿಂದ ನೀವು ಎಂದಿಗೂ ಸತ್ಯನಿಷೇಧಿಗಳಿಗೆ ಸಹಾಯ ಮಾಡುವವರಾಗಬೇಡಿ.
28 : 87
وَلَا يَصُدُّنَّكَ عَنْ ءَايَـٰتِ ٱللَّهِ بَعْدَ إِذْ أُنزِلَتْ إِلَيْكَ ۖ وَٱدْعُ إِلَىٰ رَبِّكَ ۖ وَلَا تَكُونَنَّ مِنَ ٱلْمُشْرِكِينَ
ಅಲ್ಲಾಹನ ವಚನಗಳು ನಿಮಗೆ ಅವತೀರ್ಣವಾದ ಬಳಿಕ ಅದನ್ನು ಜನರಿಗೆ ತಲುಪಿಸುವುದರಿಂದ ಅವರು ನಿಮ್ಮನ್ನು ತಡೆಯುವಂತಾಗದಿರಲಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಜನರನ್ನು ಕರೆಯಿರಿ. ನೀವು ಎಂದಿಗೂ ಬಹುದೇವಾರಾಧಕರಲ್ಲಿ ಸೇರಬೇಡಿ.
28 : 88
وَلَا تَدْعُ مَعَ ٱللَّهِ إِلَـٰهًا ءَاخَرَ ۘ لَآ إِلَـٰهَ إِلَّا هُوَ ۚ كُلُّ شَىْءٍ هَالِكٌ إِلَّا وَجْهَهُۥ ۚ لَهُ ٱلْحُكْمُ وَإِلَيْهِ تُرْجَعُونَ
ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನ ಮುಖದ (ಸಾರದ) ಹೊರತು ಇತರ ಎಲ್ಲಾ ವಸ್ತುಗಳೂ ನಾಶವಾಗುತ್ತವೆ. ಆಜ್ಞಾಧಿಕಾರವು ಅವನದ್ದು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.